Shubhashaya News

ಕಾರ್ಮಿಕರ ಅಭಿವೃದ್ಧಿಗೆ ಇಲಾಖೆ ಸೌಲಭ್ಯ ಪಡೆಯರಿ: ರವಿಕುಮಾರ

ಆಳಂದ: ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಆಟೋ ಪ್ರಚಾರಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಚಾಲನೆ ನೀಡಿದರು. ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ಕಾರ್ಮಿಕ ನಿರೀಕ್ಷಕ ರವಿಕುಮಾರ ಬಲ್ಲೂರ ಇತರರು ಇದ್ದರು.

ಆಳಂದ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಲಬುರಗಿ ಕಾರ್ಮಿಕ ಇಲಾಖೆ ಹಿರಿಯ ಕಾರ್ಮಿಕ ನಿರೀಕ್ಷಕ ರವಿಕುಮಾರ ಬಲ್ಲೂರ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಮಿಕ ಇಲಾಖೆ ಮತ್ತು ನ್ಯಾಯಾಯಲ ಆಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಆಟೋ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರ್ಹ ಕಟ್ಟಡ ಕಾರ್ಮಿಕರು ಇಲಾಖೆಗೆ ಆನ್‍ಲೈನ್‍ಲ್ಲಿ ಅರ್ಜಿ ಸಲ್ಲಿಸಿ ತಮಗಿರುವ ಸೌಲಭ್ಯಗಳಾದ ಮಕ್ಕಳಿಗೆ ಶಿಷ್ಯ ವೇತನ, ಮದುವೆ ಧನಸಹಾಯ, ವೈದ್ಯಕೀಯ ವೆಚ್ಚ, ಅಂತ್ಯಕ್ರಿಯೆ ವೆಚ್ಚ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಬತ್ಯೆ, 60ವರ್ಷ ಪೂರೈಸಿದ ಕಾರ್ಮಿಕರಿಗೆ ವಯೋನಿವೃತ್ತಿ ಬಳಿಕ ಪಿಂಚಣಿ ಯೋಜನೆ ಸೇರಿ ಹಲವು ಸೌಲಭ್ಯಗಳಿದ್ದು ಕಚೇರಿಗೆ ನೆರವಾಗಿ ಸಂಪರ್ಕಿಸಿ ಇವುಗಳ ಲಾಭವನ್ನು ಪಡೆದು ಕುಟುಂಬದ ಅಭಿವೃದ್ಧಿಯನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಆಟೋ ಪ್ರಚಾರಕ್ಕೆ ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು ಚಾಲನೆ ನೀಡಿ ಮಾತನಾಡಿ, ದುಡಿಯುವ ವರ್ಗಕ್ಕೆ ಸೌಲಭ್ಯಗಳಿಂದ ವಂಚಿತವಾಗದಂತೆ ಅಧಿಕಾರಿಗಳು ನೋಡಿಕೊಂಡು ಅವರಿಗಿರುವ ಸೌಲಭ್ಯಗಳನ್ನು ತಲುಪಿಸಬೇಕು. ಕಾರ್ಮಿಕರು ಸಹ ತಮ್ಮ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ ವಿ. ರಾಠೋಡ, ಕಾರ್ಮಿಕ ಇಲಾಖೆ ಡಿಒ ಲಕ್ಷ್ಮೀಕಾಂತ ರಂಜೇರಿ, ಬಾಲಕಾರ್ಮಿಕ ಸೋಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿ ಮತ್ತಿತರು ಪಾಲ್ಗೊಂಡಿದ್ದರು.

Comments are closed.

Don`t copy text!