ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಹಳವಂಡಗಳನ್ನು ಸಹಿಸಿಕೊಳ್ಳಬಹುದೇ?. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಸ್ವಾತಂತ್ರ್ಯ ಎನ್ನುವುದು ದಮನಿತರ ಪಾಲಿನ ಅಸ್ತ್ರವಾಗಬೇಕು ಅದಕ್ಕಾಗಿ ಮಾಧ್ಯಮಗಳು ಸಕಾರಣವನ್ನಿಟ್ಟುಕೊಂಡು ಸಮಾಜದಲ್ಲಿ ಸಮತೋಲಿತ ಸ್ಥಿತಿಯನ್ನು ತರಲು ಕೆಲಸ ಮಾಡಬೇಕು.
ಮಾಹಿತಿಯ ಹರಿವು ಸರಾಗವಾಗಿರುವ ಇಂದಿನ ಕಾಲಘಟ್ಟದಲ್ಲಿ ಮಾಧ್ಯಮಗಳು ತಮ್ಮ ನೈತಿಕ ಕಾರ್ಯವನ್ನು ಮಾಡುತ್ತಿವೆಯೇ ಎನ್ನುವುದು ಸಧ್ಯದ ಪ್ರಶ್ನೆ. ತಮಗೆ ಬೇಡವಾದ ವಿಷಯಗಳಲ್ಲಿಯೂ ಮೂಗು ತೋರಿಸುವುದು ಸರಿಯಾದುದೇ? ಅದಕ್ಕಾಗಿ ಸಂವಿಧಾನಾತ್ಮಕವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಯಾವುದು ಪ್ರಕಟಿಸಬೇಕು ಯಾವುದು ಪ್ರಕಟಿಸಬಾರದು ಎಂಬ ವಿಷಯಗಳನ್ನು ಮೊದಲೇ ಮಾಧ್ಯಮ ಸಂಸ್ಥೆಗಳಿಗೆ ತಿಳಿಸುವ ಕೆಲಸ ಮಾಡಬೇಕಿದೆ.
ಮಾಧ್ಯಮಗಳು ತಮ್ಮ ಪಾಲಿನ ಕರ್ತವ್ಯವನ್ನು ಮರೆತು ಎಷ್ಟೋ ವರ್ಷಗಳಾಗಿವೆ ಹಾಗಂತ ಮಾಧ್ಯಮವನ್ನು ಪ್ರಶ್ನಿಸಬಾರದು ಎಂದೆನಿಲ್ಲ. ಕಾಲ ಕಾಲಕ್ಕೆ ಅವು ಮಾಡುವ ತಪ್ಪುಗಳನ್ನು ಎತ್ತಿ ತೋರಿಸಬೇಕು. ವಿಮರ್ಶಿಸಬೇಕು ಅಂದಾಗ ಮಾತ್ರ ಸಮತೋಲಿತ ವಿಚಾರಧಾರೆಯ ವಿಷಯಗಳು ಸಮಾಜದಲ್ಲಿ ತಲೆ ಎತ್ತಿ ಮೆರೆಯುತ್ತವೆ. ಸತ್ಯವನ್ನು ಪರಾಮರ್ಶಿಸದೇ ಯಾವುದನ್ನು ಒಪ್ಪಿಕೊಳ್ಳಬಾರದು ಅದಕ್ಕಾಗಿ ಯಾವ ಬೆಲೆಯನ್ನಾದರೂ ತೆರಲು ಸಿದ್ಧರಿರಬೇಕು ಆ ನಿಟ್ಟಿನಲ್ಲಿ ಮಾಧ್ಯಮ ಸಂಸ್ಥೆಗಳು ಯೋಚಿಸಬೇಕಾದ ಸಮಯ ಬಂದಿದೆ. ಸೇವೆಯೂ ಉದ್ಯಮವಾದಾಗ ಈ ರೀತಿಯ ಬದಲಾವಣೆಗಳು ಸಹಜ ಆದರೂ, ನಮ್ಮ ನಿಲುವುಗಳನ್ನು ಪ್ರಕಟಿಸುವಲ್ಲಿ ಹಿಂದೇಟು ಹಾಕಬಾರದು.
ಮಾಧ್ಯಮಗಳು ತಮ್ಮಷ್ಟಕ್ಕೆ ತಾವೇ ಮೂಗುದಾರ ಹಾಕಿ ಕೊಳ್ಳಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಅವುಗಳಿಗೆ ಮೂಗುದಾರ ಹಾಕುವವರು ಬಂದರೂ ಬರಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಅವುಗಳಿಗೆ ಮೂಗುದಾರ ಹಾಕುವ ಕಾಲ ಪಕ್ವವಾಗಿಲ್ಲ. ಮುಂದಿನ ಭವಿಷ್ಯದ ದಿನಗಳನ್ನು ಆಲೋಚನೆಗಳನ್ನು ಇಟ್ಟುಕೊಂಡು ಮುನ್ನೆಡೆದರೆ ಮಾಧ್ಯಮಗಳನ್ನು ಜನ ನಂಬುತ್ತಾರೆ ಇಲ್ಲದಿದ್ದರೇ ಎಲ್ಲವನ್ನು ನಿರ್ಧರಿಸುವ ಜನರೇ ಒಂದಿನ ನಮ್ಮನ್ನು ಕಸದ ಬುಟ್ಟಿಗೆ ಹಾಕಿ ಎಸೆದು ಬಿಡುತ್ತಾರೆ. ನಿರಂತರವಾಗಿ ಈ ವಿಷಯದ ಕುರಿತು ಚರ್ಚೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ಈ ವಿಷಯ ತಾರ್ಕಿಕ ಅಂತ್ಯ ಕಾಣಲಿ.
Comments are closed.