Shubhashaya News

ವಿ.ಟಿ.ಯು ಪ್ರಾದೇಶಿಕ ಕಚೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ನಿರಂತರ ಅಧ್ಯಯನ, ಸಂಶೋಧನೆಯ ಗುಣ ಅಳವಡಿಸಿಕೊಳ್ಳಲು ಸಂಸದ ಡಾ.ಉಮೇಶ ಜಾಧವ ಸಲಹೆ

ಸೋಲು ಗೆಲುವಿನ ಮೊದಲ ಮೆಟ್ಟಿಲು. ಹೀಗಾಗಿ ನಿರಂತರ ಅಧ್ಯಯನ, ಸಂಶೋಧನೆಯ ಗುಣ ಅಳವಡಿಸಿಕೊಳ್ಳವುದು ವಿದ್ಯಾರ್ಥಿ ಜೀವನಕ್ಕೆ ಅಗತ್ಯ ಎಂದು ಸಂಸದ ಡಾ.ಉಮೇಶ ಜಾಧವ ಅವರು ಅಭಿಪ್ರಾಯಪಟ್ಟರು.
ಭಾನುವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕಚೇರಿಯಲ್ಲಿ ವಿ.ಟಿ.ಯು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು, ಐ.ಎಸ್.ಟಿ.ಇ ಹಾಗೂ ಐ.ಇ.ಟಿ.ಇ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ವ್ಯಾಕ್ಸಿನ್ ಕಂಡುಹಿಡಿಯಲು ಇಡೀ ಜಗತ್ತೇ ಶ್ರಮಿಸುತ್ತಿದ್ದಾಗ, ಭಾರತವು ತೀವ್ರ ಒತ್ತಡದ ನಡುವೆ ಕಡಿಮೆ ಅವಧಿಯಲ್ಲಿ ಅತ್ಯಂತ ಪರಿಣಾಮಕಾರಿ ವ್ಯಾಕ್ಸಿನ್ ಸಂಶೋಧಿಸಿದೆ. ಈ ಶ್ರೇಯಸ್ಸು ನಮ್ಮ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಹೆಮ್ಮೆಪಟ್ಟರು. ಹಲವು ವೈಜ್ಞಾನಿಕ ಕ್ರಾಂತಿಗೆ ಭಾರತದ ವಿಜ್ಞಾನಿಗಳು ಸಾಕ್ಷಿಯಾಗಿದ್ದಾರೆ ಎಂದು ವಿಜ್ಞಾನಿಗಳ ಸೇವೆಯನ್ನು ಕೊಂಡಾಡಿದರು.
ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ವಿದ್ಯಾರ್ಥಿಗಳು ಇಂಜಿನೀಯರ್, ಡಾಕ್ಟರ್ ಏನೇ ಆಗಲು ಬಯಸುವುದು ತಪ್ಪಲ್ಲ. ಆದರೆ, ಹಣಕ್ಕಿಂತ ಸಮಯಕ್ಕೆ ಹೆಚ್ಚು ಒತ್ತುಕೊಟ್ಟು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಂಸದ ಡಾ.ಉಮೇಶ ಜಾಧವ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅವರು ಮಾತನಾಡಿ, ಜೀವ ವಿಜ್ಞಾನ, ಸಾಮಾಜಿಕ ಅಭಿವೃದ್ಧಿ, ಸಂಶೋಧನಾತ್ಮಕ, ಆಧುನಿಕ ತಂತ್ರಜ್ಞಾನ ವಿಷಯಗಳ ಬಗ್ಗೆ ಮೌಲ್ಯಯುತ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಿರುವುದು ಇಂದಿನ ಅವಶ್ಯಕ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಸಾ ಸಂಸ್ಥೆಯ ಮಾಜಿ ವಿಜ್ಞಾನಿ ನಾರಾಯಣ ಇನಾಮದಾರ ಅವರು “ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ” ಎಂಬ ವಿಷಯ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಶಾಸಕ ಶಶೀಲ್ ನಮೋಶಿ, ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ವಿ.ಟಿ.ಯು. ಕಲಬುರಗಿ ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ, ಪ್ರೊ.ಎಂ.ಎಸ್.ಜೋಗದ, ಪ್ರೊ. ಶಂಭುಲಿಂಗಪ್ಪ ಬಿ., ವಿ.ಟಿ.ಯು.ನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Comments are closed.

Don`t copy text!