ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದಿಂದ ಸಕಲ ಮೂಲಸೌಕರ್ಯವುಳ್ಳ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್ ವೀರಯ್ಯ ತಿಳಿಸಿದರು.
ಶನಿವಾರ ನಗರದ ಗ್ರ್ಯಾಂಡ್ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಗಮದಲ್ಲಿ ಹೆಚ್ಚಿನ ಅನುದಾನ ಇಲ್ಲದ ಕಾರಣ ಟ್ರಕ್ ಟರ್ಮಿನಲ್ ನಿರ್ಮಾಣವನ್ನು ಪಿ.ಪಿ.ಪಿ. ಅಥವಾ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಚಿಂತಿಸಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದಲ್ಲಿ ನಿಗಮದಿಂದಲೇ ನಿರ್ಮಿಸಲಾಗುವುದು ಎಂದರು.
ಪ್ರಸ್ತುತ ರಾಜ್ಯದಲ್ಲಿ ಯಶವಂತಪೂರ, ಧಾರವಾಡ ಹಾಗೂ ಮೈಸೂರು-ನಂಜನಗೂಡು ರಸ್ತೆಯಲ್ಲಿ ನಿರ್ಮಿಸಿರುವ ಟರ್ಮಿನಲ್ಗಳು ಚಾಲ್ತಿಯಲ್ಲಿವೆ. ಬೆಂಗಳೂರಿನ ದಾಸನಪೂರದಲ್ಲಿ 46 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿದೆ. ಇದಲ್ಲದೆ ಹುಬ್ಬಳ್ಳಿಯಲ್ಲಿ 56 ಎಕರೆ, ಹೊಸಪೇಟೆಯಲ್ಲಿ 48 ಎಕರೆ ಜಮೀನು ನಿರ್ಮಾಣಕ್ಕೆ ಲಭ್ಯವಿದೆ. ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಿವೇಶನ ಮೀಸಲಿಡಲಾಗಿದೆ ಎಂದರು.
ಸಿಮೆಂಟ್ ನಗರಿಯಾಗಿರುವ ಕಲಬುರಗಿಯಲ್ಲಿ ಲಾರಿಗಳ ಸಂಚಾರ ದಟ್ಟಣೆ ಹೆಚ್ಚಿದ್ದು, ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಅತ್ಯಗತ್ಯ. ಈ ಸಂಬಂಧ ಇಂದು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಜಮೀನು ಗುರುತಿಸಲು ನಿರ್ದೇಶನ ನೀಡಿದ್ದೇನೆ. ಜಿಲ್ಲೆಯ ಕಮಲಾಪುರದ ಮತ್ತು ಕಲಬುರಗಿ-ಶಹಾಬಾದ ರಸ್ತೆಯ ನಂದೂರ ಬಳಿ ನಿವೇಶನವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40 ರಿಂದ 50 ಎಕರೆ ಪ್ರದೇಶದಲ್ಲಿ ಸಕಲ ವ್ಯವಸ್ಥೆವುಳ್ಳ ಒಂದು ಮಾದರಿ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶಿಸಿದ್ದು, ಇದಕ್ಕೆ ಪೂರಕವಾಗಿ ನಿವೇಶನ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯ ಹಾಗೂ ಅಂತರ ರಾಜ್ಯ ವಾಹನಗಳು ದಿನನಿತ್ಯ ಸಂಚಾರದ ಮೇಲಿರುವುದರಿಂದ ಹಾಗೂ ವಾಹನ ಚಾಲಕರಿಗೆ ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ ಬಳಿ ಕುಡಿಯುವ ನೀರು, ಶೌಚಾಲಯ, ಲಾಡ್ಜ್, ರೀಕ್ರಿಯೇಷನ್ ಕ್ಲಬ್, ಹೊಟೆಲ್ ಸ್ಥಾಪಿಸಲಾಗುವುದು. ಲಾಜಿಸ್ಟಿಕ್ಸ್, ಪೆಟ್ರೋಲ್ ಬಂಕ್, ಎಟಿಎಂ, ಪೆÇಲೀಸ್ ಸ್ಟೇಷನ್, ಸ್ಪೇರ್ ಪಾಟ್ರ್ಸ್ ಅಂಗಡಿ, ಮೆಡಿಕಲ್, ಕ್ಲಿನಿಕ್ ಹೀಗೆ ಎಲ್ಲಾ ಮೂಲಸೌಕರ್ಯಗಳ ಸೇವೆ ಜೊತೆಗೆ ನಿಗಮದ ಆರ್ಥಿಕ ಚೇತರಿಕೆಗೆ ಶಾಪಿಂಗ್ ಕಾಂಪ್ಲೆಕ್ಸ್ ಸಹ ನಿರ್ಮಿಸುವ ಯೋಜನೆ ನಮ್ಮ ಮುಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದೇವಿಂದ್ರ ಎಸ್. ಸೀನೂರ ಮತ್ತು ಆನಂದ ಇಂಗಳಗಿ ಇದ್ದರು.
Comments are closed.