Shubhashaya News

ಬಜೆಟ್: ಒಂದು ವಿಮರ್ಶೆ

ರಾಜ್ಯ ಬಜೆಟ್ ಸೋಮವಾರ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಹೆಸರಿನಲ್ಲಿದೆ. ಈ ಬಾರಿಯ ಬಜೆಟ್‍ನ ವಿಶೇಷತೆ ಏನು. ತೆರಿಗೆ ರಹಿತ ಬಜೆಟ್ ಮಂಡಿಸಿರುವುದೇ ಈ ಬಾರಿಯ ವಿಶೇಷ. ಯಾವ ವಲಯದಲ್ಲಿಯೂ ತೆರಿಗೆ ವಿಧಿಸದೇ ಹಳೆಯ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲು ಅನುದಾನ ನೀಡಿರುವುದು ಆಶಾದಾಯಕ ಬೆಳವಣಿಗೆ.
ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಯಂದು ಮಂಡಿಸಿದ ಬಜೆಟನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಹತ್ತು ಹಲವು ಯೋಜನೆಗಳ ಘೋಷಣೆಯಾಗಿದ್ದರೂ ಅದರ ಫಲ ಮಾತ್ರ ನಿಂತಿರುವುದು ಅನುಷ್ಠಾನದಲ್ಲಿ ಮಾತ್ರ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಕ್ಕೆ ಹಣ ಮೀಸಲಿಡಲಾಗಿದೆ. ಬೆಂಗಳೂರಿಗೆ ತುಸು ಹೆಚ್ಚು ಎನಿಸುವಷ್ಟು ಹಣ ಮೀಸಲಿಟ್ಟಿದ್ದು ಉಳಿದ ಭಾಗದ ಜನಗಳಿಗೆ ಸ್ವಲ್ಪ ನಿರಾಶೆಯಾಗಿದೆ.

ಪ್ರದೇಶವಾರು ಹಂಚಿಕೆಯಾಗಬೇಕಿದ್ದ ಅನುದಾನವು ದಂಡಿಯಾಗಿ ಒಂದೇ ಕಡೆ ಹರಿದು ಹೋಗಿದ್ದು ಹಲವರ ಹುಬ್ಬೇರುವಂತೆ ಮಾಡಿದೆ. ದಕ್ಷಿಣ ಕರ್ನಾಟಕಕ್ಕೆ ಸಿಂಹಪಾಲು ದೊರಕಿದೆ. ಉತ್ತರ ಕರ್ನಾಟಕಕ್ಕೆ ಮತ್ತೆ ಯಥಾಪ್ರಕಾರ ಮಲತಾಯಿ ಧೋರಣೆ ಮುಂದುವರೆದಿದೆ. ಬಜೆಟ್ ಗಾತ್ರ ಈ ಬಾರಿ ಕುಗ್ಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು ಆದರೆ ಮುಖ್ಯಮಂತ್ರಿಗಳು ಗಾತ್ರ ತಗ್ಗಿಸದೇ ಅಲ್ಪ ಪ್ರಮಾಣದಲ್ಲಿ ಹಿಗ್ಗಿಸಿ ಜನರನ್ನು ಒಲೈಸಿಕೊಳ್ಳುವ ಯತ್ನ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿಗದಿತ ಅನುದಾನ ದೊರೆಕಿಲ್ಲ. ಈ ಭಾಗಕ್ಕೆ ಹೇಳಿಕೊಳ್ಳುವಂಥಹ ಯಾವ ಯೋಜನೆಗಳು ಘೋಷಿಸಿಲ್ಲ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ದೊರೆಯುತ್ತಿರುವ 1500ಕೋಟಿ ರೂ. ಅನುದಾನ 2000ಕೋಟಿಗೆ ಹೆಚ್ಚಿಸಬೇಕು ಎನ್ನುವ ಕೂಗು ಕೂಗಾಗಿಯೇ ಉಳಿದಿದೆ. ಈ ಭಾಗದ ನೂತನ ವಿಶ್ವವಿದ್ಯಾಲಯ ರಾಯಚೂರು ವಿವಿಗೆ ಹಣ ನೀಡಿಲ್ಲ. ಕೌಶಲ್ಯ ಅಭಿವೃದ್ಧಿ ವಿವಿ ಗಗನ ಕುಸುಮಾವಾಗಿಯೇ ಉಳಿದಿದೆ. ಜವಳಿ ಪಾರ್ಕ್, ತೊಗರಿ ಮಂಡಳಿಗೆ ಕಾಯಕಲ್ಪ, ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಚಕಾರ ಎತ್ತದಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ. ಮುಖ್ಯಮಂತ್ರಿಗಳು ಅನುದಾನವೇನೂ ಕೊಟ್ಟರು ಆದರೆ ಸಂಪನ್ಮೂಲ ಕ್ರೋಢಿಕರಣಕ್ಕೆ ಯಾವ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಒಟ್ಟಿನಲ್ಲಿ ಬಜೆಟ್ ಎನ್ನುವುದು ಕನ್ನಡಿಯೊಳಗಿನ ಗಂಟಾಗಬಾರದು ನಮ್ಮ ಆಶಯ.

Comments are closed.

Don`t copy text!