Shubhashaya News

ಕಾಯಕ ಶರಣರ ಜಯಂತಿಯನ್ನು ಸರಳವಾಗಿ ಆಚರಣೆಗೆ ನಿರ್ಧಾರ

ಇದೇ ಮಾರ್ಚ್ 11 ರಂದು ಜಿಲ್ಲಾಡಳಿತದಿಂದ ಆಚರಿಸಲಾಗುವ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಯಂತ್ಯೋತ್ಸವ ಸಮಿತಿ ಸಭೆ ಸರ್ವಾನುಮತದ ನಿರ್ಧಾರ ಕೈಗೊಂಡಿತು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಿದಂತೆ ಇದೇ ಮಾರ್ಚ್ 11 ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಯಕ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಜಯಂತಿ ಆಚರಿಸಲಾಗುತ್ತದೆ.
ಶಿಷ್ಠಾಚಾರದಂತೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ಉಪನ್ಯಾಸ, ಸಾಂಸ್ಕøತಿಕ ಮತ್ತು ಮೆರವಣಿಗೆ ಕಾರ್ಯಕ್ರಮ ಇರುವುದಿಲ್ಲವಾದರಿಂದ ಸಮಾಜದ ಮುಖಂಡರು ಸಹಕರಿಸಬೇಕು ಎಂದ ಡಾ.ಶಂಕರ ವಣಿಕ್ಯಾಳ ಅವರು ಜಯಂತಿ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.
ಈ ಸಭೆಯಲ್ಲಿ ಕಲಬುರಗಿ ಶರಣ ಡೋಹರ ಕಕ್ಕಯ್ಯಾ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಸಾಯಬಣ್ಣ ಹೋಳ್ಕರ್, ಕೋಡ್ಲಾ ಉರಿಲಿಂಗಪೆದ್ದಿ ಮಠದ ಉಪಾಧ್ಯಕ್ಷ ಶಂಕರ ಕೋಡ್ಲಾ, ಮಾದರ ಚನ್ನಯ್ಯ ಸಮಾಜದ ಅಧ್ಯಕ್ಷ ಸಂಬಣ್ಣ ಹೊಳಕುಂದ, ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಕಾಶಿರಾಯ ನಂದೂರಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಚನ್ನಮ್ಮ ಸೇರಿದಂತೆ ಮತ್ತಿತರರು ಇದ್ದರು.

Comments are closed.

Don`t copy text!