Shubhashaya News

ಸಾಹಿತ್ಯ ಪರಿಷತ್‌ ಚುನಾವಣೆ: ಹೊಸ ಯೋಜನೆಗಳಿಂದ ಮೆರಗು ಬರಲಿ: ಕರವೇ

ಪ್ರತಿಯೊಬ್ಬ ಸಾಮಾನ್ಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೇವೆಗೈಯಬೇಕು.

ಕಲಬುರಗಿ: ಕರ್ನಾಟಕ ರಾಜ್ಯದ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತ್ ತನ್ನದೇಯಾದ ಮಹತ್ವ ಹೊಂದಿದೆ. ಕನ್ನಡತನವನ್ನು ಹಿರಿದಾಗಿಸಿ ಕನ್ನಡಿಗರಿಗೆ ಕಾವಲಾಗಿರುವ ಇಲ್ಲಿ ಪ್ರಸ್ತುತ ರಾಜಕಾರಣ ನುಸುಳಿ ಎತ್ತಲೋ ಸಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅಸಮಾಧಾನ ಹೊರಹಾಕಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇಲ್ಲಿನ ಕವಿ-ಸಾಹಿತಿಗಳಿಗೆ ಪ್ರೇರಣೆಯಾಗಬೇಕಾದ ಸಂಸ್ಥೆಯ ಚುನಾವಣೆಯಲ್ಲಿ ಅದರ ಗಂಧ , ಗಾಳಿಯು ಗೊತ್ತಿರದವರು ಸ್ಪರ್ದಿಸಿ ಅದರ ಮೂಲ ಧ್ಯೇಯವನ್ನೇ ಮರೆ ಮಾಚುತ್ತಿದ್ದಾರೆ ಎಂದರು. ಸಾಹಿತ್ಯ ಪರಿಷತ್ತಿನಲ್ಲಿ ಚುನಾಯಿತರಾದ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟ , ತಾಲೂಕು ಮಟ್ಟದ ಆಡಳಿತ ಮಂಡಳಿಯ ಸದಸ್ಯರು ಪರಿಷತ್ತಿನ ಪ್ರತಿಯೊಬ್ಬ ಸಾಮಾನ್ಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೇವೆಗೈಯಬೇಕು. ಗದ್ದುಗೆ ಗುದ್ದಾಟದಲ್ಲಿ ಕಾಲ ಹರಣ ಮಾಡಿ ಸೇವಾವಧಿ ಮುಗಿಯುವಂತಾಗಬಾರದು. ರಾಜ್ಯ ಹಾಗೂ ಜಿಲ್ಲಾ ಮಟ್ಟದಂತೆ ತಾಲೂಕನ್ನು ಪ್ರತಿನಿಧಿಸುವ ಆಡಳಿತ ಮಂಡಳಿಗೂ ಚುನಾವಣೆ ನಡೆಯುವಂತೆ ಈಗಿರುವ ಸಾಹಿತ್ಯ ಪರಿಷತ್ತಿನ ಬೈಲಾವನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಪದಾಧಿಕಾರಿಗಳ , ಸಾಮಾನ್ಯ ಸದಸ್ಯರ ಮಾರ್ಗದರ್ಶನದಲ್ಲಿ ಸಾಗಿ ನಡೆಯಬೇಕು. ಕನ್ನಡಾಂಬೆಯ ಸಮ್ಮೇಳನಗಳು ಜಾತ್ರೆಗಳಂತಾಗದೇ ಸಾಹಿತ್ಯ ಸಾಹಿತ್ಯ ಬಡಿಸುವ ಹಬ್ಬಗಳಾಗಲಿ ಮತ್ತು ಸಭಲೀಕರಣದತ್ತ ಸಾಹಿತ್ಯ ಪರಿಷತ್ತು ಸಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ. ಕೂಡಲೇ ಸಾಹಿತ್ಯ ಪರಿಷತ್ತು ಈ ಹೊಸ ಯೋಜನೆಗಳಿಂದ ಮೆರಗು ತರಲಿ ಎಂದು ಈ ಮೂಲಕ ಅವರು ಸಾಹಿತ್ಯ ಪರಿಷತ್ತಿಗೆ ಮನವಿ ಮಾಡಿದರು.

Comments are closed.

Don`t copy text!