ಕಲಬುರಗಿಯ ಸ್ಫೂರ್ತಿ ಯುವಕ ಸಂಘದಿಂದ ಅಕ್ಷರ ಮಾಂತ್ರಿಕ, ಖ್ಯಾತ ಬರಹಗಾರರಾಗಿದ್ದ ದಿ. ರವಿ ಬೆಳಗೆರೆಯವರ 63ನೇ ಜನ್ಮ ದಿನವನ್ನು ಇಲ್ಲಿಯ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಗೌರವ ಪುರಸ್ಕಾರ, ಸ್ಫೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರ್ಷಲ್ ಸಿದ್ಧಾರ್ಥ ಕಳಸ್ಕರ್, ಬಸವರಾಜ ಬಿರಬಿಟ್ಟೆ, ಸಚೀನ್ ಫರಹತಾಬಾದ್, ದತ್ತು ಭಾಸಗಿ, ಸುರೇಶ ಬಡಿಗೇರ, ಮಂಜುನಾಥ ನಾಲ್ವಾರಕರ್ ಇದ್ದರು.
ಕಲಬುರಗಿಯ ಸ್ಫೂರ್ತಿ ಯುವಕ ಸಂಘದಿಂದ ಅಕ್ಷರ ಮಾಂತ್ರಿಕ, ಖ್ಯಾತ ಬರಹಗಾರರಾಗಿದ್ದ ದಿ. ರವಿ ಬೆಳಗೆರೆಯವರ 63ನೇ ಜನ್ಮ ದಿನವನ್ನು ಇಲ್ಲಿಯ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಹರ್ಷಲ್ ಸಿದ್ಧಾರ್ಥ ಕಳಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು, ರವಿ ಬೆಳಗೆರೆಯವರು ಕನ್ನಡದಲ್ಲಿ ಓದುವ ಪರಂಪರೆಯನ್ನು ಹೆಚ್ಚಿಸಿ ಯುವಜನತೆಯನ್ನು ಸೆಳೆದ ಪತ್ರಕರ್ತರಾಗಿದ್ದರು ಅವರಲ್ಲಿ ಇದ್ದ ಕಸುಬುದಾರಿಕೆಯೇ ಅವರನ್ನು ರಾಜ್ಯಾದ್ಯಂತ ಮನೆ ಮಾತಾಗಿಸಿತ್ತು ಎಂದು ಅಭಿಪ್ರಾಯಪಟ್ಟರು.
ಸಾಹಿತಿ, ಪತ್ರಕರ್ತ ಶಿವರಂಜನ ಸತ್ಯಂಪೇಟೆಯವರು ಮಾತನಾಡಿ, ಸಾಮಾನ್ಯ ಓದುಗನಿಂದ ಹಿಡಿದು ಕ್ಲಾಸಿಕಲ್ ಎನ್ನುವ ಓದುಗರವರೆಗೂ ಅವರು ಬರವಣಿಗೆ ಕೃಷಿ ಮಾಡಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೇ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಏಕೈಕ ಪತ್ರಕರ್ತ ಎಂದರೆ ಅದು ರವಿ ಬೆಳಗೆರೆಯೇ. ಅವರು ಸುದ್ದಿಯನ್ನು ಹೆಕ್ಕಿ ಕೊಡುತ್ತಿದ್ದ ರೀತಿ ಮಾತ್ರ ತುಂಬಾ ಭಿನ್ನವಾಗಿರುತಿತ್ತು ಈ ಕಾರಣದಿಂದಲೇ ಅವರು ಬರೆಯುತ್ತಿದ್ದ ಬರಹಗಳು ಓದುಗರ ಮನಸ್ಸನ್ನು ಸೆಳೆಯುತ್ತಿದ್ದವು ಎಂದು ಹೇಳಿದರು.
ಪತ್ರಿಕೆಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ವರದಿಗಾರರಿಗೆ ಪ್ರತಿ ತಿಂಗಳು ತಪ್ಪದೇ ಚೆಕ್ ಮೂಲಕ ಸಂಬಳ ಕೊಡುತ್ತಿದ್ದರು. ಅವರ ಹಾಯ್ ಬೆಂಗಳೂರು ಓದುವುದಕ್ಕೆ ಓದುಗರು ಪ್ರತಿ ಗುರುವಾರ ಬೆಳಿಗ್ಗೆ 5 ಗಂಟೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು 10 ಗಂಟೆಯ ವೇಳೆಗೆ ಪತ್ರಿಕೆಯ ಎಲ್ಲ ಪ್ರತಿಗಳು ಖಾಲಿಯಾಗಿರುತ್ತಿದ್ದವು. ಸಾಮಾನ್ಯ ವ್ಯಕ್ತಿಯೊಬ್ಬ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಸಾವಿರಾರು ಮಕ್ಕಳು ಓದುವ ಡೋನೆಶನ್ ಇಲ್ಲದ ಶಾಲೆ ತೆರೆದಿರುವುದು ಅವರೊಳಗಿನ ಮಾತೃಹೃದಯವನ್ನು ತೋರಿಸುತ್ತದೆ ಎಂದರು.
ಹಿರಿಯ ಸಾಹಿತಿ ಸಿದ್ದಾರಾಮ ಹೊನ್ಕಲ್ ಮಾತನಾಡಿ, ರವಿ ಬೆಳಗೆರೆಯವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಓದಿಕೊಂಡಿದ್ದರು ಹೀಗಾಗಿಯೇ ಅವರಿಗೆ ಜಾಸ್ತಿ ಬರೆಯಲು ಸಾಧ್ಯವಾಯಿತು ಇನ್ನೂ ಕೆಲವೊಂದು ವರ್ಷ ನಮ್ಮ ಜೊತೆಗೆ ಇದ್ದಿದ್ದರೇ ಅವರಿಂದ ಅಪಾರ ಪ್ರಮಾಣದ ಸಾಹಿತ್ಯವನ್ನು ನಿರೀಕ್ಷಿಸಬಹುದಿತ್ತು ಎಂದು ಹೇಳಿ ಅವರ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಿಪಾಲರೆಡ್ಡಿ ಮುನ್ನೂರು, ಶಿವರಂಜನ ಸತ್ಯಂಪೇಟೆ, ಸಿದ್ದಾರಾಮ ಹೊನ್ಕಲ್, ರವಿ ಇವಣಿ, ಹಣಮಂತ ಶೇರಿ, ಖಜೂರಿ ಅವರನ್ನು ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ವಿನೋದಕುಮಾರ ಹೊಸಳ್ಳಿ, ಯಶೋಧಾ ಕಟಕೆ, ಮಹ್ಮದ್ ಯೂಸುಫ್ ಪಟೇಲ್, ಡಾ. ನಿಸಾರೋದ್ದೀನ್ ಪಟೇಲ್, ಜಗನ್ನಾಥ ಸೂರ್ಯವಂಶಿ, ರವಿಚಂದ್ರ ಗುತ್ತೇದಾರ, ರೇಖಾ ಪಾಟೀಲ, ಅನ್ನಪೂರ್ಣ ಸಂಗೋಳಗಿ, ವಿದ್ಯಾವತಿ ರಾಠೋಡ, ಎಂ ಡಿ ಸಿದ್ದಿಕಿ ಅವರಿಗೆ ಸ್ಫೂರ್ತಿ ಯುವಕ ಸಂಘದ ಸ್ಫೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯ ಮೇಲೆ ಬಸವರಾಜ ಬಿರಬಿಟ್ಟೆ, ಭವಾನಿಸಿಂಗ ಠಾಕೂರ, ಸಚೀನ್ ಫರಹತಾಬಾದ್, ದತ್ತು ಭಾಸಗಿ, ಸುರೇಶ ಬಡಿಗೇರ ಇದ್ದರು.
ಸ್ಫೂರ್ತಿ ಯುವಕ ಸಂಘದ ಅಧ್ಯಕ್ಷ ಮಂಜುನಾಥ ನಾಲ್ವಾರಕರ್ ನಿರೂಪಿಸಿ, ವಂದಿಸಿದರು.
Comments are closed.