Shubhashaya News

ಒಳ್ಳೆಯತನ ವಾಲ್ಮೀಕಿ ನಾಯಕ ಅವರ ವ್ಯಕ್ತಿತ್ವದಲ್ಲಿಯೇ ಇತ್ತು: ಶಾಸಕ ಪ್ರಿಯಾಂಕ್ ಖರ್ಗೆ

ತಳಮಟ್ಟದಿಂದಲೇ ಬೆಳೆದು ಜನನಾಯಕರಾಗಿ ಬೆಳೆದು ಬಂದಿದ್ದ‌ ವಾಲ್ಮೀಕಿ ನಾಯಕ ಅವರ ವ್ಯಕ್ತಿತ್ವದಲ್ಲಿಯೇ ಒಳ್ಳೆಯತನವಿತ್ತು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ನಿನ್ನೆ ನಿಧನರಾದ ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರಿಗೆ ಶೃದ್ದಾಂಜಲಿ ಸಲ್ಲಿಸಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಾಲ್ಮೀಕಿ ನಾಯಕ ಅವರು ಖರ್ಗೆ ಸಾಹೇಬರ ವಿರುದ್ದ ಹಾಗೂ ನನ್ನ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರಾಜಕೀಯವಾಗಿ ನಮ್ಮ ಹಾಗೂ ಅವರ ನಡುವೆ ಚುನಾವಣೆಗಾಗಿ ಸ್ಪರ್ಧೆ ಇರುತ್ತಿತ್ತು. ಆದರೆ ವೈಯಕ್ತಿಕವಾಗಿ ನಾವು ಪರಸ್ಪರರನ್ನು ಗೌರವಿಸಿ ವಿಶ್ವಾಸದಿಂದಲೇ ಮಾತನಾಡುತ್ತಿದ್ದೆವು. ಅಭಿವೃದ್ದಿ ಕುರಿತಂತೆ ಚರ್ಚಿಸುತ್ತಿದ್ದೆವು ಎಂದು ಅಗಲಿದ ನಾಯಕನೊಂದಿಗಿನ ತಮ್ಮ ಒಡನಾಟವನ್ನು ನೆನೆದರು.

ಅಭಿವೃದ್ದಿ ವಿಚಾರದಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿ ಹಲವು ಸಲಹೆ ನೀಡುತ್ತಿದ್ದ ವಾಲ್ಮೀಕಿ ನಾಯಕರು ಚಿತ್ತಾಪುರ ಪಟ್ಟಣದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು ಧೂಳಿನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಗುತ್ತಿಗೆದಾರರಿಗೆ ಹೇಳಿ ಬೇಗ ಕಾಮಗಾರಿ ಮುಗಿಸಿ” ಎಂದು ಸಲಹೆ ನೀಡಿದ್ದರು. ಆಗ ಅವರಿಗೆ ಉತ್ತರಿಸಿದ್ದ ನಾನು ” ಅಭಿವೃದ್ದಿ ಕೆಲಸಗಳು ಮುಗಿಯಬೇಕಾದರು ಸ್ವಲ್ಪ ವಿಳಂಬವಾಗಬಹುದು ಆದರೂ ಆದಷ್ಟು ಬೇಗ ಮುಗಿಸಿ ಇದೇ ವಿಚಾರದಲ್ಲಿ ನಿಮ್ಮೊಂದಿಗೆ ಚುನಾವಣೆ ಎದುರಿಸುತ್ತೇನೆ ” ಎಂದು ತಮಾಷೆಯಾಗಿ ಹೇಳಿದ್ದೆ ಎಂದು ಪ್ರಿಯಾಂಕ್ ಖರ್ಗೆ ನುಡಿದರು.

ಬಿಜೆಪಿ ಪಕ್ಷವನ್ನು ಬಲಪಡಿಸಿದ್ದರು. ಅವರ ಅಗಲಿಕೆ‌ಯಿಂದಾಗಿ ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಹಾನಿಯಾಗದೆ ಚಿತ್ತಾಪುರ ಕ್ಷೇತ್ರಕ್ಕೂ ಹಾನಿ ಆಗಿದೆ. ಯಾಕೆಂದರೆ, ಶಾಸಕರಾಗಿ ಅವರೂ ಕೂಡಾ ಇಲ್ಲಿ ಸೇವೆ‌ಸಲ್ಲಿಸಿದ್ದಾರೆ. ಅವರ ನಿಧನದಿಂದಾದ ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ, ಆದ ದುಃಖ ಮರೆಯುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಹೇಳಿದರು.

Comments are closed.

Don`t copy text!