Shubhashaya News

About Us

ಶುಭಾಶಯ ಇದು ಸಂಪೂರ್ಣವಾಗಿ ಕೇವಲ ಸುದ್ದಿ ಮತ್ತು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಆರಂಭಿಸಿದ ಸುದ್ದಿ ಸಂಸ್ಥೆ. ಜಗತ್ತಿನಲ್ಲಿ ಮೊಬೈಲ ಕ್ರಾಂತಿ ಆರಂಭವಾದ ಮೇಲೆ ಜಗತ್ತು ಅಂಗೈ ಬಳಿ ಬಂದು ನಿಂತಿದೆ. ಮಾಹಿತಿಯು ಸೂರ್ಯನ ಕಿರಣಗಳ ವೇಗದಂತೆ ಪ್ರಪಂಚದಲ್ಲಿ ಪಸರಿಸುತ್ತಿದೆ. ಓದುಗರಿಗೆ, ನೋಡುಗರಿಗೆ ಬೆರಳ ತುದಿಯಲ್ಲಿ ಮಾಹಿತಿಯು ಡಿಜಿಟಲ್ ಸಾಧನದಲ್ಲಿ ಸಿಗುವಂತಾಗಬೇಕು. ಸಧ್ಯದ ತಂತ್ರಜ್ಞಾನದಲ್ಲಿ ಲಭ್ಯವಿರುವ ಎಲ್ಲ ಸಾಧನಗಳ, ಸಲಕರಣೆಗಳ ಮೂಲಕ ಅವರನ್ನು ತಲುಪಬೇಕು ಎನ್ನುವುದು ನಮ್ಮ ಶುಭಾಶಯ ತಂಡದ ಸದಾಶಯ.
ಅಪರಾಧವನ್ನು ವೈಭವೀಕರಣ ಮಾಡದೇ, ಸುದ್ದಿಯನ್ನು ಸುದ್ದಿಯಂತೆ ಹೇಳವುದು ಹಾಗೂ ಅದನ್ನು ತೋರಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ನಮ್ಮ ಹೊಣೆಗಾರಿಕೆ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬ ವಾಗ್ದಾನವನ್ನು ನೀಡುತ್ತೇವೆ. ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಸುದ್ದಿಗಳನ್ನು ನೀಡುತ್ತೇವೆ. ಆ ಸುದ್ದಿಗಳು ಸಮಾಜದಲ್ಲಿ ಒಂದಿಷ್ಟು ಬದಲಾವಣೆ ತಂದರೆ ನಮ್ಮ ಶ್ರಮ ಸಾರ್ಥಕ.
ಸಕಾರಾತ್ಮಕ ಸುದ್ದಿಯನ್ನು ಕೊಟ್ಟು ಸಮಾಜದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವುದು ಆ ಮೂಲಕ ನಮ್ಮ ಗುರಿಗಳನ್ನು ಸಾಧಿಸುವುದು. ಮಾಧ್ಯಮ ಇಂದು ಕವಲೊಡೆದಿದೆ. ಒಂದು ಸುದ್ದಿಯ ಹಿಂದೆ ವಿವಿಧ ಆಯಾಮಗಳಿರುತ್ತವೆ. ಸುದ್ದಿ ರಂಜನೀಯ, ರೋಚಕವಾಗಿರುವಂತೆ ಸ್ವಾಭಾವಿಕವಾಗಿಯೂ ಇರುತ್ತವೆ. ಕೇವಲ ಸುದ್ದಿಗಳಿಗೆ ಬಣ್ಣ ಕೊಡುವುದು ನಮ್ಮ ಕೆಲಸವಲ್ಲ ಸುದ್ದಿಯ ಹಿಂದೆ ಇರುವ ನೋವನ್ನು, ವ್ಯಥೆಯನ್ನು ಸಮಾಜಕ್ಕೆ, ವ್ಯವಸ್ಥೆಗೆ ತಿಳಿಸಿ ಸಾಧ್ಯವಾದಷ್ಟು ನಮ್ಮ ಮಿತಿಯಲ್ಲಿ ಅದಕ್ಕೆ ಪರಿಹಾರ ಸೂಚಿಸುವ ಕಾರ್ಯವೂ ಆಗಬೇಕು ಎನ್ನುವುದು ನಮ್ಮ ಕನಸು.
ಸುದ್ದಿಯ ವ್ಯಾಖ್ಯಾನ ಏನು ಹೇಳುತ್ತದೆಯೋ ಅದೆಲ್ಲವನ್ನು ನೈತಿಕ ತಳಹದಿ ಮತ್ತು ಭಾರತೀಯ ಸಂವಿಧಾನ, ನ್ಯಾಯಾಂಗದ ಚೌಕಟ್ಟಿನಲ್ಲಿ ಕೊಡುವಲ್ಲಿ ಅಹರ್ನಿಶಿ ಶ್ರಮಿಸುತ್ತೇವೆ. ಭಾರತೀಯ ಸಂವಿಧಾನವೇ ನಮಗೆ ಶ್ರೇಷ್ಟ. ಅಭಿವ್ಯಕ್ತಿ ಸ್ವಾತಂತ್ರ್ಯವು ಸ್ವೇಚ್ಛಾಚಾರದ ರೀತಿಯಲ್ಲಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅದರ ಮೌಲ್ಯಗಳಿಗೆ ಚ್ಯುತಿ ಬರದಂತೆ ಸುದ್ದಿ, ಮಾಹಿತಿ ಮತ್ತು ಮನೋರಂಜನೆಯನ್ನು ಉಣ ಬಡಿಸಲು ಕಂಕಣ ಬದ್ಧರಾಗಿದ್ದೇವೆ. ಮಾಧ್ಯಮದ ನೀತಿ ಸಂಹಿತೆಗೆ ಧಕ್ಕೆ ಬಾರದಂತೆ ಡಿಜಿಟಲ್ ಮಾಧ್ಯಮದ ಕಾಯಿದೆ ಕಾನೂನುಗಳಿಗೆ ಅನುಗುಣವಾಗಿ ನಮ್ಮ ತಂಡ ಕಾರ್ಯನಿರ್ವಹಿಸಲಿದೆ.
ಪ್ರತಿಯೊಂದು ವಿಷಯವು ಪ್ರಕಟ, ಪ್ರಚಾರಕ್ಕೆ ಅರ್ಹವೇ ಎನ್ನುವುದನ್ನು ನಮ್ಮ ಸಂಪಾದಕೀಯ ಮಂಡಳಿ ತೀರ್ಮಾನಿಸುತ್ತದೆ ಆ ತೀರ್ಮಾನದ ಹಿಂದೆ ಸತ್ಯ, ನ್ಯಾಯ ಅಡಗಿರುತ್ತದೆ. ಪ್ರಾದೇಶಿಕತೆಯೊಂದಿಗೆ ಜಾಗತಿಕವಾಗಿಯೂ ಕಾರ್ಯನಿರ್ವಹಿಸುವುದು ನಮ್ಮ ಆದ್ಯತೆಗಳಲ್ಲಿ ಒಂದು. ಮುಂದಿನ ದಿನಗಳಲ್ಲಿ ನಮ್ಮ ತಂಡ ಇನ್ನಷ್ಟೂ ಕ್ರಿಯಾಶೀಲವಾಗಿ ಕೆಲಸ ಮಾಡುವಲ್ಲಿ ತಮ್ಮೆಲ್ಲರ ಸಹಕಾರವಿರಲಿ.

Don`t copy text!