Shubhashaya News

ವಾಗ್ದರಿ ರಾಚೋಟೇಶ್ವರ ಮಹಾರಥೋತ್ಸವ ಸಂಭ್ರಮ

ಆಳಂದ: ರಾಚಣವಾಗ್ದರಿ ಗ್ರಾಮದ ಶ್ರೀ ರಾಚೋಟೇಶ್ವರ ಜಾತ್ರೆಯಲ್ಲಿ ದೇವರ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಆಳಂದ: ತಾಲ್ಲೂಕಿನ ರಾಚಣ್ಣ ವಾಗ್ಲೆರಿ ಗ್ರಾಮ ದೇವತಾ ಶ್ರೀ ರಾಚೋಟೇಶ್ವರರ ಮಹಾರಥೋತ್ಸವವು ಸಡಗರ ಸಂಭ್ರಮದಿಂದ ಎಂದಿನಂತೆ ಅದ್ಧೂರಿಯಾಗಿ ನಡೆಯಿತು.
ಆರಂಭದಲ್ಲಿ ಗ್ರಾಮದ ಅಣ್ಣಪ್ಪಗೌಡ ಅವರ ಮನೆಯಿಂದ ನಂದಿಕೋಲ ಮೆರವಣಿಗೆ ಹಾಗೂ ದಳಪತಿ ಅವರ ಮನೆಯಿಂದ ಕುಂಬಕಳಸದ ಮೆರವಣಿಗೆಯೂ ಮಧ್ಯಾಹ್ನ ಗ್ರಾಮದ ಹೊರವಲಯದ ದೇವಸ್ಥಾನಕ್ಕೆ ತಲುಪಿತು.
ನಂತರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ವಿಶೇಷವಾಗಿ 50ಕ್ಕೂ ಹೆಚ್ಚು ಪುರವಂತರ ಒಡುಪು, ಕುಣಿತದೊಂದಿಗೆ ಅಗ್ನಿಕುಂಡಕ್ಕೆ ರಾಚೋಟೇಶ್ವರ ದೇವರ ಪುತ್ಥಳಿಯ ಉತ್ಸವವು ಕಳೆ ಕಟ್ಟಿತು.
ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದರು. ನಂತರ ಸಾವಿರಾರೂ ಭಕ್ತರು ಸಾಮೂಹಿಕವಾಗಿ ಅಗ್ನಿ ಹಾದು ತಮ್ಮ ಹರಕೆ ತೀರಿಸಿ ಭಕ್ತಿ ಮೆರೆದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಬಸವ ಕಲ್ಯಾಣದ ಶಾಸಕ ಶರಣು ಸಲಗರ, ಹುಮನಾಬಾದ ಶಾಸಕ ಸಿದ್ದು ಪಾಟೀಲ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಿಜೆಪಿ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಸಾಕ್ಷಿಯಾದರು.
ಬೆಣ್ಣೆತೂರಾ ನದಿಯ ದಡದಲ್ಲಿನ ಶ್ರೀ ರಾಚೋಟೇಶ್ವರ ದೇವಸ್ಥಾನದ ಭಟ್ಟದ ಹಸಿರು ಸಿರಿಯು ಇಂದಿನ ರಥೋತ್ಸವಕ್ಕಾಗಿ ಸಿಂಗಾರಗೊಂಡಂತೆ ಕಂಡಿತು. ಹಾರಕೂಡ ಹಿರೇಮಠ ಡಾ.ಚನ್ನವೀರ ಶಿವಾಚಾರ್ಯರು ಹಾಗೂ ಮುತ್ತ್ಯ್ತಾನ ಬಬಲಾದ ಮಠದ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಸಮ್ಮುಖದಲ್ಲಿ ಸಾಗಿದ ಉತ್ಸವವು ಪುμÁ್ಪಲಂಕೃತ ಹಾಗೂ ರುದ್ರಾಕ್ಷಿ ಮಾಲೆಯಿಂದ ಕಂಗೋಳಿಸುತ್ತಿರುವ ಮಹಾರಥಕ್ಕೆ ಪೂಜೆ ನೀಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವದಲ್ಲಿ ವಿವಿಧ ವಾದ್ಯಮೇಳಗಳ ಸಡಗರ, ಯುವಕರು ರಣೋತ್ಸಾಹ ಹಾಗೂ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಮಹಾರಥವನ್ನು ಎಳೆಯಲಾಯಿತು. ರಥಬೀದಿಯ ಇಕ್ಕೆಲದಲ್ಲಿ ನಿಂತ ಭಕ್ತರು ಉತ್ತತ್ತಿ, ಬಾಳಹಣ್ಣು, ಕೂಬರಿ ಮತ್ತಿತರ ಫಲಪುಷ್ಪಗಳು ರಥದ ಮೇಲೆ ಸುರಿದು ಭಕ್ತರು ಹರಕೆ ತೀರಿಸಿದರು.
ರಾಚೋಟೇಶ್ವರ ಮಹಾರಾಜ ಕೀ ಜೈ ಘೋಷಣೆಗಳು ಬೆಟ್ಟಗಳ ನಡುವೆ ಮಾರ್ದನಿಸಿತು. ಕಲಬುರಗಿ, ಬೀದರ ಹಾಗೂ ನೆರೆಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದರು.

Comments are closed.

Don`t copy text!