ಕಲಬುರಗಿ ಜಿಲ್ಲಾಧಿಕಾರಿಗಳು ಕೂಡಲೇ ಕಬ್ಬಿಗೆ ಸಮರ್ಪಕ ಕಬ್ಬಿನ ದರ ನಿಗದಿಪಡಿಸಿ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಬೆಲೆ ನಿಗದಿ ಮಾಡಲಾಗಿದೆ ಆದರೆ ಕಲಬುರಗಿ ಜಿಲ್ಲೆಯಲ್ಲಿ ಬೆಲೆ ನಿಗದಿಯಾಗಿಲ್ಲ ಇದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಲದೇ ಸರ್ಕಾರದ ವಿಳಂಬ ನೀತಿಯಿಂದ ರೈತರು ಬೆಳೆದ ಕಬ್ಬು ಒಣಗುತ್ತಿದೆ. ಮುಂದೆ ಅದು ತೂಕ ಕೂಡ ಕಳೆದುಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಸಾಲಿನ ಕಬ್ಬು ಕಟಾವು ಪ್ರಾರಂಭದ ಹಂತದಲ್ಲಿದ್ದು, ಬೆಲೆ ಇನ್ನೂ ನಿಗದಿಯಾಗಿಲ್ಲ. ಕಟಾವು ಸಮಯದಲ್ಲಿ ಕಾರ್ಮಿಕರು ಮತ್ತು ಲಾರಿಯವರು ರೈತರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿರುವುದರಿಂದ ಇದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಖಾನೆಯ ವ್ಯಾಪ್ತಿಯ 40 ಕೀ.ಮೀ ಒಳಗಿನ ಎಲ್ಲ ರೈತರ ಕಬ್ಬು ನುರಿಸಬೇಕು ಅಲ್ಲದೇ ಕಟಾವು ಮಾಡಲು ರೈತರಿಂದ ಮೊದಲು ಪಡೆಯುವ ಹಣವನ್ನು ಪಡೆಯಬಾರದು ಎಂದು ತಿಳಿಸಿದ್ದಾರೆ.
ಹೊರರಾಜ್ಯದಿಂದ ಕಬ್ಬು ತೆಗೆದುಕೊಳ್ಳುವುದು ನಿಲ್ಲಿಸಬೇಕು. ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಸಿಎಸ್‍ಆರ್ ನಿಧಿಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಕಾರ್ಖಾನೆಯ ವ್ಯಾಪ್ತಿಯಲ್ಲಿ ರೈತರಿಗೆ ಅನೂಕೂಲವಾಗುವಂತೆ ಕೈಗೊಳ್ಳಬೇಕು. ಯಾವ ರೈತರ ಕಬ್ಬನ್ನು ಬಾಕಿ ಉಳಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ಪ್ರತಿವರ್ಷ ಕಬ್ಬು ಕಟಾವು ಆದ ನಂತರ ಕಾನೂನು ಬದ್ಧವಾಗಿ 15 ದಿನದೊಳಗೆ ಕಬ್ಬಿನ ಬಿಲ್ಲು ಸಂಪೂರ್ಣ ಪಾವತಿ ಮಾಡಬೇಕು. ರೈತರ ಕಬ್ಬು ಯಾವುದೇ ಕಾರಣದಿಂದ ಕಟಾವು ಮಾಡಲು ಆಗದಿದ್ದರೆ ಕಾರ್ಖಾನೆಯಿಂದ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
Comments are closed.