ಆಳಂದ: ಪಟ್ಟಣದ ಪುರಸಭೆ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡದ ಕುರಿತು ಸದಸ್ಯ ಶ್ರೀಶೈಲ ಪಾಟೀಲ, ಶ್ರೀಶೈಲ ಖಜೂರಿ ಅಹ್ವಾಲಿಗೆ ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ ಬೇಡಿಕೆ ಚರ್ಚಿಸಿದರು.
ಆಳಂದ: ಸ್ಥಳೀಯ ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಶಾಖೆಯ ಸಂಬಂಧಿತ ಅಧಿಕಾರಿಗಳು ಸಮರ್ಪಕವಾಗಿ ಬೆಳಗಿನ ಉಪಹಾರ ನೀಡದೇ ಉಪಹಾರದ ಹಣವನ್ನು ನುಂಗಿಹಾಕುತ್ತಿದ್ದಾರೆ ಎಂದು ಪುರಸಭೆ ಬಿಜೆಪಿ ಸದಸ್ಯ ಶ್ರೀಶೈಲ ಪಾಟೀಲ ಮತ್ತು ಮುಖಂಡ ಶ್ರೀಶೈಲ ಖಜೂರಿ ಅವರು ಆರೋಪಿಸಿದರು.
ಪುರುಸಭೆಯಲ್ಲಿ ಉಪಹಾರವಿಲ್ಲದೆ ಕುಳಿತ್ತಿದ್ದ ಪೌರಕಾರ್ಮಿಕರ ಸಮಸ್ಯೆ ಆಲಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ಮಾತನಾಡಿದ ಅವರು, ಸಂಬಂಧಿತ ಶಾಖೆಯ ಅಧಿಕಾರಿಗಳ ಸಕಾಲಕ್ಕೆ ಬಂದು ಕರ್ತವ್ಯ ನಿರ್ವಹಿಸುತ್ತಿಲ್ಲ. ಪೌರಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ಉಪಹಾರದಲ್ಲಿ ಮೊಟ್ಟೆ ನೀಡುತ್ತಿಲ್ಲ. ಉಪಹಾರ ಕೊಟ್ಟರು ಜೊತೆಗೆ ಮೊಟ್ಟೆ ಕೊಡುವ ನಿಯಮವಿದ್ದರು ಕೊಡುತ್ತಿಲ್ಲ. ಈ ಕುರಿತು ಕಾರ್ಮಿಕರ ಪ್ರಶ್ನಿಸಿದರೆ ಸ್ಪಂದಿಸುತ್ತಿಲ್ಲ. ಗುರುವಾರ ಕಾರ್ಮಿಕರಿಗೆ ಉಪಹಾರವೇ ಕೊಟ್ಟಿಲ್ಲ. ಸಂಬಂಧಿತ ಪರಿಸರ ಅಭಿಯಂತರ ಹಾಜರಾಗಿಲ್ಲ ಎಂದು ಹರಿಹಾಯ್ದರು. ನಿತ್ಯ ಕೆಲಸ ನಿರ್ವಹಿಸುವ ಕಾರ್ಮಿಕರು ಹಠಾತಾಗಿ ಉಪಹಾರವಿಲ್ಲದೆ ಕುಳಿತುಕೊಂಡಿದ್ದಾರೆ. ಮುಂದೆ ಇದೇ ಪರಿಸ್ಥಿತಿ ನಡೆದರೆ ಹೋರಾಟ ಕೈಗೊಳ್ಳಬೇಕಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಒತ್ತಾಯಿಸಿದರು.
ಸ್ಥಳದಲ್ಲಿ ಹಾಜರಿದ್ದ ಪುರಸಭೆ ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ ಅವರು ಸರ್ಕಾರದ ನಿಯಮದಂತೆ ಉಪಹಾರ ನೀಡಬೇಕು. ಗುರುವಾರ ಉಪಹಾರ ವಿತರಕರಿಂದ ಸಮಸ್ಯೆಯಾಗಿದೆ. ನಿಮ್ಮ ಬೇಡಿಕೆಯನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಮುಖಂಡರು ಮತ್ತು ಕಾರ್ಮಿಕರು ಹಿಂದಕ್ಕೆ ಸರಿದರು. ಎಸ್‍ಐ ರಾಘವೇಂದ್ರ, ಲಕ್ಷ್ಮಣ ತಳವಾರ ಮತ್ತು ಮಹಿಳಾ ಮತ್ತು ಪುರುಷ ಕಾರ್ಮಿಕರು ಇದ್ದರು.
Comments are closed.