Shubhashaya News

`ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಕೃತಿ ಲೋಕಾರ್ಪಣೆ

`ದಾಸಸಾಹಿತ್ಯವನ್ನು ವಿಶ್ವದೆಲ್ಲೆಡೆ ಪಸರಿಸಿದವರು ಪಾರ್ಥಸಾರಥಿ'

ಕಲಬುರಗಿಯಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅವರು `ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಡಾ. ಗುರುರಾಜ ವಿ. ಮೊಹರೀರ್, ಡಾ. ಲಕ್ಷ್ಮೀಕಾಂತ ವಿ. ಮೊಹರೀರ್, ಡಾ. ಭುರ್ಲಿ ಪ್ರಹ್ಲಾದ್, ಸಂಧ್ಯಾ ಹೊನಗುಂಟಿಕರ್ ಇದ್ದರು.

ಕಲಬುರಗಿ: ದಾಸಸಾಹಿತ್ಯವನ್ನು ವಿಶ್ವದೆಲ್ಲೆಡೆ ಪಸರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಾಸಸಾಹಿತ್ಯ ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಸಂಶೋಧನೆ ಕೈಗೊಂಡು ಈ ಸಾಹಿತ್ಯದಲ್ಲಿನ ನೈತಿಕ ಮೌಲ್ಯ, ಮಾನವೀಯತೆಯ ಸಂದೇಶಗಳನ್ನು ಜಗತ್ತಿನಾದ್ಯಂತ ಪಾರ್ಥಸಾರಥಿ ಅವರು ಪ್ರಚುರಪಡಿಸಿದ್ದಾರೆ. ಜೊತೆಗೆ ದೇಶ-ವಿದೇಶಗಳಲ್ಲಿನ ಲಕ್ಷಾಂತರ ಭಕ್ತರಿಗೆ ವಿಷ್ಣುಸಹಸ್ರನಾಮದ ಮಹತ್ವವನ್ನು ತಿಳಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ನಗರದ ಬಿದ್ದಾಪುರ ಕಾಲೋನಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಅಂಬಾಸ್ಮøತಿ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ದಾಸಸಾಹಿತ್ಯ ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಜೀವನ, ಸಾಧನೆ ಕುರಿತು ಖ್ಯಾತ ದಾಸಸಾಹಿತ್ಯ ವಿದ್ವಾಂಸ ಡಾ. ಲಕ್ಷ್ಮೀಕಾಂತ ಮೊಹರೀರ್ ಅವರು ರಚಿಸಿರುವ `ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಕೃತಿಯು ಯುವಜನರಿಗೆ ಹೊಸ ಹೊಳಹುಗಳನ್ನು ತೆರೆದು ತೋರಿಸುತ್ತದೆ, ಮಾನವೀಯತೆ, ದೈವನಂಬಿಕೆ, ಜೀವನಪ್ರೀತಿ, ಉನ್ನತ ಧ್ಯೇಯ, ಗುರಿಗಳನ್ನು ತಮ್ಮ ಜೀವನದಲ್ಲಿ ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ವಿಚಾರಗಳು ಅಡಗಿವೆ ಎಂದು ಹೇಳಿದರು.
ಹಿರಿಯ ಸಾಹಿತಿ ಶ್ರೀಮತಿ ಸಂಧ್ಯಾ ಹೊನಗುಂಟಿಕರ್, ಆರ್.ಜೆ. ಪಿಯು ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಭುರ್ಲಿ ಪ್ರಹ್ಲಾದ್, ಉದ್ಯಮಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ಶಾಖೆಯ ಅಧ್ಯಕ್ಷ ಶ್ರೀಧರ್ ಸರಾಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕೃತಿಯ ಲೇಖಕ ಡಾ. ಲಕ್ಷ್ಮೀಕಾಂತ ಮೊಹರೀರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾಲ್ವರು ದಾಸಸಾಹಿತ್ಯ ವಿದ್ವಾಂಸರಾದ ಶ್ರೀಮತಿ ವಿರಜಾ ಪಾಂಡುರಂಗರಾವ ಕಂಪ್ಲಿ, ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶೋಭಾ ಗುರುರಾಜ ದೇಸಾಯಿ, ಶ್ರೀಮತಿ ಸುರೇಖಾ ರಘುರಾಮ ದೋಟಿಹಾಳ, ಖ್ಯಾತ ಗಾಯಕ ಅನಂತರಾಜ ಮಿಸ್ತ್ರಿ ಅವರಿಗೆ `ದಾಸಾಮೃತ-2024′ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂಟು ಮಹಿಳಾ ಭಜನಾ ಮಂಡಳಿಗಳಿಗೆ `ರುಕ್ಮಿಣಿ ವಿಠ್ಠಲ-2024′ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಯಶ್ರೀ ಕುಲಕರ್ಣಿ ಹಾಗೂ ಸುನೀತಾ ನಾಗೂರಕರ್ ಪ್ರಾರ್ಥಿಸಿದರು. ನಿರುಪಮಾ ಗುರುರಾಜ ದೇಸಾಯಿ ಹಾಗೂ ಡಾ. ಗುರುರಾಜ ವಿ. ಮೊಹರೀರ ನಿರೂಪಿಸಿದರು. ವಾಣಿಶ್ರೀ ಗುರುರಾಜ ಹಾಗೂ ಮನೋಜ ಮೊಹರೀರ ನಿರ್ವಹಣೆ ಮಾಡಿದರು. ಉಷಾ ಪಾಂಡುರಂಗ ಮೊಹರೀರ ವಂದಿಸಿದರು.
ಬ್ರಾಹ್ಮಣ ಸಮಾಜದ ಹಿರಿಯರಾದ ಪಾಂಡುರಂಗರಾವ ಕಂಪ್ಲಿ, ದಾಸಸಾಹಿತ್ಯ ವಿದ್ವಾಂಸ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗೀಕರ್, ವೆಂಕಟೇಶ ಮುದಗಲ್, ಕೆ.ಪಿ. ಗಿರಿಧರ್, ಪತ್ರಕರ್ತ ಶೇಷಗಿರಿ ಹುಣಸಗಿ ಮತ್ತಿತರರು ಪಾಲ್ಗೊಂಡಿದ್ದರು.

Comments are closed.

Don`t copy text!