ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಟ್ವೀಟ್ ಮತ್ತು ಜವಳಿ ಪಾರ್ಕ್ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿರುವ ವಿಷಯಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜವಳಿ ಪಾರ್ಕ್ ಮೈಸೂರಿಗೆ ಹೊಸದಾಗಿ ಮಂಜೂರಿಯಾಗಿದೆ ಆದರೆ ಅದು ಕಲಬುರಗಿಗೆ ಮಂಜೂರಿಯಾಗಿರುವುದಲ್ಲ. ಕಲಬುರಗಿಗೆ ಮಂಜೂರಿಯಾಗಿ ಅದು ಮೈಸೂರಿಗೆ ಎತ್ತಂಗಡಿಯಾಗಿದ್ದರೆ ಅದರ ಬಗ್ಗೆ ತಾವು ಪ್ರಶ್ನೆ ಎತ್ತಬಹುದಿತ್ತು ಅದರೆ ತಾವು ಕೇವಲ ವಿರೋಧ ಮಾಡುವುದಕ್ಕಾಗಿ ಮಾತ್ರ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನೀಡಿರುವ ವಕ್ತಾರನ ಸ್ಥಾನದ ಘನತೆಯನ್ನು ತುಂಬುವುದಕ್ಕಾಗಿ ಮತ್ತು ಪ್ರತಿದಿನ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉಮೇದಿಯೊಂದಿಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಸುಳ್ಳುಗಳನ್ನು ಜನರಿಗೆ ಹೇಳುತ್ತಿದ್ದಾರೆ. ಸಧ್ಯ ಕಾಂಗ್ರೆಸ್‍ಗೆ ದೇಶದಲ್ಲಿ ನೆಲೆಯಿಲ್ಲ ಕೇವಲ ಅಪಪ್ರಚಾರ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಛೇಡಿಸಿದ್ದಾರೆ.
ರಾಜ್ಯ ಸರ್ಕಾರವು ಅಂಕಿ ಸಂಖ್ಯೆಗಳ ಸಮೇತ ವಿಧಾನ ಪರಿಷತ್ತಿನಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಇದು ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ ಅಲ್ಲದೇ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ರಾಜ್ಯ ಕ್ರಿಯಾಶೀಲವಾಗಿದೆ ಎನ್ನುವುದು ಸಾಬೀತುಪಡಿಸಿದಂತಾಗುತ್ತದೆ ಆದರೆ ಶಾಸಕ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರ ಕೊಟ್ಟ ಅಂಕಿ ಸಂಖ್ಯೆಯನ್ನು ತಮ್ಮ ಟ್ವೀಟ್‍ನಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವೈಫಲ್ಯ ಎಂದು ಬಿಂಬಿಸುವಲ್ಲಿ ನಿರತರಾಗಿದ್ದಾರೆ.
ರಾಜ್ಯ ಸರ್ಕಾರವು ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಹಿಂದೆ ಬಿದ್ದಿಲ್ಲ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟುಕೆಗಳನ್ನು ಮಟ್ಟ ಹಾಕುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ ಇದಕ್ಕೆ ಪುರಾವೆಯೇ ಈಗ ನಿಮಗೆ ನೀಡಿರುವ ಅಂಕಿ ಸಂಖ್ಯೆಗಳು. ಮಟಕಾ, ಇಸ್ಪೀಟ್, ಗಾಂಜಾ ಪ್ರಕರಣಗಳು ಪತ್ತೆ ಹಚ್ಚಿರುವುದು ಸರ್ಕಾರದ ಕಾರ್ಯಸೂಚಿಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಪ್ರಕರಣಗಳ ರೇಟ್ ಕಾರ್ಡ ನಿಮಗೆ ತಲುಪಿದಂತೆ ಕಾಣುತ್ತಿದೆ ಆದರೆ ನಮ್ಮ ಸರ್ಕಾರದಲ್ಲಿ ರೇಟ್ ಕಾರ್ಡ ಪದ್ಧತಿ ಇಲ್ಲ ಇಲ್ಲಿ ಏನಿದ್ದರೂ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿದೆ. ಸರ್ಕಾರ ಪತ್ತೆ ಹಚ್ಚಿರುವ ಪ್ರಕರಣಗಳು ಹಾಗು ಕೊಟ್ಟಿರುವ ಅಂಕಿ ಸಂಖ್ಯೆಗಳನ್ನು ಬಳಸಿಕೊಂಡು ರಾಜಕೀಯ ಪ್ರಚಾರ ಪಡೆಯಲು ಹವಣಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
Comments are closed.