ಕಸಾಪ ಚುನಾವಣೆಯಲ್ಲಿ ಹೆಚ್ಚಿನ ಮತಹಾಕಿ ಗೆಲ್ಲಿಸಿ: ಜೋಶಿ
ಸಾಹಿತ್ಯ ಪರಿಷತ್‍ನಲ್ಲಿ ಸೇವೆ ಸಲ್ಲಿಸಬೇಕು ಎಂದು ಸ್ಪರ್ಧಿಸಿದ್ದೇನೆ ಹೊರೆತು ನನಗೆ ಅಧಿಕಾರದ ಲಾಲಸೆ ಇಲ್ಲ.
ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿದರು.
ಮೇ.9 ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ. ಮಹೇಶ ಜೋಶಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಯಾವುದೇ ಜಾತಿ, ಧರ್ಮದ ಭೇದ ಭಾವವಿಲ್ಲ. ನಾವೆಲ್ಲರೂ ಒಂದೇ ಎನ್ನುವ ಉದ್ದೇಶ ಮಾತ್ರ ಇದೆ. ಹೀಗಾಗಿ ಕನ್ನಡಿಗರು ನಾವೆಲ್ಲರೂ ಒಂದೇ ಎನ್ನುವ ಭಾವನೆ ಇಟ್ಟಿಕೊಂಡು ಕನ್ನಡ ಸಾಹಿತ್ಯ ಪರಿಷತ್‍ನ್ನು ಉಳಿಸಿ ಬೆಳೆಸಲು ಶ್ರಮಿಸಬೇಕಿದೆ ಎಂದರು.
ಸಾಹಿತ್ಯ ಪರಿಷತ್‍ನಲ್ಲಿ ಸೇವೆ ಸಲ್ಲಿಸಬೇಕು ಎಂದು ಸ್ಪರ್ಧಿಸಿದ್ದೇನೆ ಹೊರೆತು ನನಗೆ ಅಧಿಕಾರದ ಲಾಲಸೆ ಇಲ್ಲ. ಅಧಿಕಾರದ ಆಸೆ ಇದ್ದರೇ ನಾನು ಸ್ಪರ್ಧಿಸುತ್ತಿರಲಿಲ್ಲ. ಕನ್ನಡವನ್ನು ಉಳಿಸಿ ಬೆಳೆಸಲು ಹಗಲು ರಾತ್ರಿ ಎನ್ನದೇ ದುಡಿಯುತ್ತೇನೆ. ಈ ಭಾಗದ ಸಾಹಿತ್ಯ, ಸಂಸ್ಕøತಿ, ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರಾಮಾಣಿಕನಾಗಿ ಸೇವೆ ಸಲ್ಲಿಸುವ ಮೂಲಕ ಸಾಹಿತ್ಯದ ರಥ ಮೇಲೆತ್ತರಕ್ಕೆ ಕೊಂಡೊಯಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಾಧಕರಿಗೆ ಪ್ರಶಸ್ತಿಗಳು ಸಿಗುತ್ತಿಲ್ಲ. ಸಮಯ ಸಾಧಕರಿಗೆ ಪ್ರಶÀಸ್ತಿಗಳು ಸಿಗುತ್ತಿರುವುದು ಬೇಸರ ಮೂಡಿಸಿದೆ. ಆದ್ದರಿಂದ ಸಮಯ ಸಾಧಕರಿಗೆ ಸಿಗುವ ಪ್ರಶಸ್ತಿಗಳಿಗೆ ಕಡಿವಾಣ ಹಾಕಿ ನಿಜವಾದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಜನಪಯೋಗಿಯಾಗಿ ಜನ ಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸುವ ಕ್ರಮ ಕೈಗೊಂಡು, ಆಜೀವ ಸದಸ್ಯರ ಶುಲ್ಕವನ್ನು ಕಡಿಮೆಗೊಳಿಸಲಾಗುವುದು. ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕೃತಗೊಳಿಸಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಹೊಸ ಆಪ್‍ನ್ನು ಸೃಷ್ಠಿಸಿ ಆ ಆಪ್ ಮುಖಾಂತರವೇ ಸದಸ್ಯತ್ವವನ್ನು ಸುಲಭವಾಗಿ ಪಡೆಯಲು ಅನುಕೂಲತೆಗಳನ್ನು ಮಾಡಲಾಗುವುದು. ವೆಬ್ ಸೈಟ್ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪೂರ್ಣ ಕಾರ್ಯ ಚಟುವಟಿಕೆಗಳ ವಿವರ ಹಾಗೂ ಖರ್ಚು ವೆಚ್ಚದ ಮಾಹಿತಿಯನ್ನು ಪ್ರಕಟಿಸಿ ಪಾರದರ್ಶಕವಾಗಿ ಕನ್ನಡಿಗರ ಮುಂದಿಡಲಾಗುವುದು ಎಂದರು.
ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಮಾತೃಭಾಷೆ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಕನ್ನಡ ಶಾಲೆಗಳು ಮುಚ್ಚದ ಹಾಗೆ ಜಾಗೃತೆ ವಹಿಸಲಾಗುವುದು. ಕನ್ನಡ ಅನ್ನದ ಭಾಷೆಯಾಗಲು ಎಲ್ಲಾ ರೀತಿಯ ಭಗೀರಥ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನು ಪರಿಷ್ಕರಿಸಿ ತಿದ್ದುಪಡಿ ಮಾಡಿ ವಿಶ್ರಾಂತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪರಿಷತ್ತಿನ ಚಟುವಟಿಕೆಗಳ ಹಿನ್ನೆಲೆಯುಳ್ಳ ತಜ್ಞರ ಸಮಿತಿಯನ್ನು ರಚಿಸಲಾಗುವುದು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತರುವ ಆಶಾ ಭಾವನೆ ಇಟ್ಟಿಕೊಳ್ಳಲಾಗಿದೆ ಎಂದು ಹೇಳಿದರು.
ನಿವೃತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ನಾಡೋಜ ಡಾ. ಮಹೇಶ ಜೋಶಿ ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ರಾಜಕೀಯ ಸಿದ್ಧಾಂತಗಳಿಂದ ದೂರ ಇದ್ದು ಯಾರ ಪರವೋ ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ತಮ್ಮ ಸೇವೆಯನ್ನು ನಿಷ್ಠೆಯಿಂದ ಮಾಡಿ ದೂರದರ್ಶನ ಇದ್ದಿದ್ದನ್ನು ಸಮೀಪ ದರ್ಶನವನ್ನಾಗಿ ಮಾಡಿ ನಿವೃತಿ ಹೊಂದಿದ್ದಾರೆ. ಅವರು ಸಾಹಿತ್ಯದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದಾರೆ. ಹೀಗಾಗಿ ಈ ಬಾರಿಯ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ನಬಿಸಾಬ್ ಕುಷ್ಠಗಿ, ರವಿ ಇವಣಿ ಇದ್ದರು.
Comments are closed.