Shubhashaya News

ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ: ದಾಮಾ

ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವವರು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಕಪ್ಪು ಚುಕ್ಕಿ ಇಲ್ಲದೇ ಸೇವಾ ನಿವೃತ್ತಿ ಹೊಂದಬೇಕು

ಚಿತ್ತಾಪುರ: ಪಟ್ಟಣದ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ವಯೋ ನಿವೃತ್ತಿ ಹೊಂದಿರುವ ಮನೋಹರ ಹಾದಿಮನಿ ಹಾಗೂ ನೂತನ ಆಹಾರ ನೀರಿಕ್ಷಕರಾಗಿ ಆಗಮಿಸಿದ ಅನಿತಾ ಪೂಜಾರಿ ಅವರನ್ನು ತಾಲೂಕು ನ್ಯಾಯ ಬೆಲೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಹೇಳಿದರು.
ಪಟ್ಟಣದ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ವಯೋ ನಿವೃತ್ತಿ ಹೊಂದಿರುವ ಮನೋಹರ ಹಾದಿಮನಿ ಹಾಗೂ ನೂತನ ಆಹಾರ ನೀರಿಕ್ಷಕರಾಗಿ ಆಗಮಿಸಿರುವ ಅನಿತಾ ಪೂಜಾರಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸರ್ಕಾರಿ ಕೆಲಸ ಪವಿತ್ರವಾದದ್ದು, ಆದ್ದರಿಂದ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವವರು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಕಪ್ಪು ಚುಕ್ಕಿ ಇಲ್ಲದೇ ಸೇವಾ ನಿವೃತ್ತಿ ಹೊಂದಬೇಕು ಎಂದು ಮನವಿ ಮಾಡಿದರು.
ವಯೋ ನಿವೃತ್ತಿಗೊಂಡ ಮನೋಹರ ಹಾದಿಮನಿ ಮಾತನಾಡಿ, ನಾನು ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿತಂದಿದೆ. ನನ್ನ ಸೇವಾ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಸೇವೆ ಸಲ್ಲಿಸಿದ್ದಕ್ಕೆ ನನ್ನ ಸನ್ಮಾನವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ನಿವೃತ್ತ ಶಿರಸ್ತೇದಾರ ಮರೇಪ್ಪ ಬುಕ್ಕಲ್, ವೀರಭದ್ರಯ್ಯ ಸಾಲಿಮಠ ಮಾತನಾಡಿದರು. ಇದೇ ವೆಳೆ ನೂತನ ಆಹಾರ ನೀರಿಕ್ಷಕರಾದ ಅನೀತಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿನಾಥ ಹೊನ್ನಾಳಿ, ಪ್ರವೀಣಕುಮಾರ ಸಾತನೂರ, ಅಣ್ಣಾರಾವ ಪಾಟೀಲ್ ಸಾವಳಗಿ, ಪರಮೇಶ್ವರ ಚೀಲಿ, ಎಸ್.ಬಿ ಬಿರಾದಾರ ಸೇರಿದಂತೆ ಇತರರು ಇದ್ದರು. ಧನರಾಜ ಯಾದವ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿ, ವಂದಿಸಿದರು.

Comments are closed.

Don`t copy text!