ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಅಶ್ವಥ ನಾರಾಯಣ ಮಾತನಾಡಿದರು.
ರಾಜಕೀಯ ಪಕ್ಷಗಳಲ್ಲಿ ವಕ್ತಾರನ ಸ್ಥಾನ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಮಾಜದ ನಡುವಿನ ಸಂಪರ್ಕ ಕೊಂಡಿಯಿದ್ದಂತೆ ಅದನ್ನು ಸಮರ್ಥವಾಗಿ ನಿಭಾಯಿಸುವ ಗುರುತರ ಜವಾಬ್ದಾರಿ ಮಾಧ್ಯಮ ವಕ್ತಾರರ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ ನಾರಾಯಣ ಅಭಿಪ್ರಾಯಪಟ್ಟರು.
ಶನಿವಾರ ಕಲಬುರಗಿಯ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಕಲಬುರಗಿ ಮಾಧ್ಯಮ ವಿಭಾಗ ಹಮ್ಮಿಕೊಂಡಿದ್ದ ಮಾಧ್ಯಮ ಮಂಥನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಜನತಾ ಪಕ್ಷವು ರಾಜಕೀಯ ಸಿದ್ಧಾಂತದ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ ಹೀಗಾಗಿಯೇ ಇಂದು ಅದು ಜಗತ್ತಿನ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಕುಟುಂಬ ಪಕ್ಷಗಳಾಗಿ ಪರಿವರ್ತನೆಯಾಗುತ್ತಿವೆ ಇದಕ್ಕೆ ಕಾಂಗ್ರೆಸ್ ಪಕ್ಷ ಕೂಡ ಹೊರತಾಗಿಲ್ಲ ಹೀಗಾಗಿಯೇ ಅದು ಸಂಪೂರ್ಣ ದೇಶದಲ್ಲಿ ನೆಲಕಚ್ಚಿದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮಾತನಾಡಿ, ಮಾಧ್ಯಮಗಳಿಗೆ ಜನಭಿಪ್ರಾಯ ರೂಪಿಸುವ ಶಕ್ತಿಯಿದೆ ಅವುಗಳ ಸಮರ್ಥ ಸದ್ಬಳಕೆಯನ್ನು ಮಾಡಿ ಜನಗಳ ಹತ್ತಿರ ಹೋಗುವ ಕೌಶಲ್ಯ ರೂಢಿಸಿಕೊಳ್ಳಬೇಕು. ಮಾಧ್ಯಮ ಪ್ರತಿನಿಧಿಯಾಗಿ ಕೆಲಸ ಮಾಡುವಾಗ ತನ್ನ ಜವಾಬ್ದಾರಿಯ ಅರಿವು ಹೊಂದಿ ಪಕ್ಷಕ್ಕೆ ಧಕ್ಕೆ ಆಗದ ರೀತಿಯಲ್ಲಿ ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಾಗಾರದಲ್ಲಿ ಸಂಘಟನೆ, ಮಾಧ್ಯಮ, ರಾಜಕೀಯ ಕುರಿತು ಅಶ್ವಥ ನಾರಾಯಣಗೌಡ, ಮಾಧ್ಯಮ ಮತ್ತು ಪತ್ರಿಕೆಗಳ ಮಹತ್ವ ಕುರಿತು ವಾದಿರಾಜ ವ್ಯಾಸಮುದ್ರ, ವಕ್ತಾರರು ಮತ್ತು ಮಾಧ್ಯಮ ಸಂಚಾಲಕರ ಪಾತ್ರ ಕುರಿತು ಕರುಣಾಕರ ಖಾಸಲೆ ಅವಧಿ ತೆಗೆದುಕೊಂಡರು.
ಕಾರ್ಯಾಗಾರದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚಂದು ಪಾಟೀಲ, ವೆಂಕಟಪ್ರಸಾದ ಮಾಲೆಪಾಟಿ, ಪ್ರಶಾಂತ ಕೆಡಂಜಿ, ಸಾಹೇಬಗೌಡ ಪಾಟೀಲ, ಡಿ ಎನ್ ಪಾಟೀಲ, ಸಂತೋಷ ಹಾದಿಮನಿ, ಸೂರಜ ತಿವಾರಿ, ಅಂಬಾದಾಸ ಕುಲಕರ್ಣಿ ಸೇರಿದಂತೆ ಕಲಬುರಗಿ ವಿಭಾಗದ ಮಾಧ್ಯಮದ ಸಂಚಾಲಕರು, ಸಹ ಸಂಚಾಲಕರು, ವಕ್ತಾರರು ಭಾಗವಹಿಸಿದ್ದರು. ನಾಗರಾಜ ಮಹಾಗಾಂವಕರ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಈಶ್ವರಸಿಂಗ್ ಠಾಕೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಭಾಗವಹಿಸಿದ್ದರು.
Comments are closed.