Shubhashaya News

ಸಾರಿಗೆ ಸೌಲಭ್ಯದಿಂದ ವಂಚಿತ ಖಾದ್ಯಾಪುರ ಗ್ರಾಮ

ಕಮರುತ್ತಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ!

ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಬರೋಬ್ಬರಿ 73 ವರ್ಷಗಳು ಉರುಳಿವೆ. ಆದರೂ, ರಾಜ್ಯದ ಅದೆಷ್ಟೋ ಹಳ್ಳಿಗಳ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಖಾದ್ಯಾಪುರ ಗ್ರಾಮ ಕೂಡ ಸೇರಿದೆ.

 

ಹೌದು, ಈ ಊರಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಮಕ್ಕಳ ಶಿಕ್ಷಣದ ಭವಿಷ್ಯ ಕಮರಿ ಹೋಗುತ್ತಿದೆ‌. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಖಾದ್ಯಾಪುರ ಗ್ರಾಮಸ್ಥರು ಕಳೆದ ಏಳು ದಶಕಗಳಿಂದ ಸಾರಿಗೆ ಬಸ್​ಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 150 ರಿಂದ ಕೇವಲ 5 ಕಿ.ಮೀ ದೂರದ ಖಾದ್ಯಾಪುರ ಗ್ರಾಮಕ್ಕೆ ಸೂಕ್ತ ಡಾಂಬರ್ ರಸ್ತೆ ಇದ್ದರೂ ಬಸ್ ಸೌಲಭ್ಯ ಕಲ್ಪಿಸಿಲ್ಲ.

ಬಸ್ ಸೌಲಭ್ಯ ಇಲ್ಲದ ಕಾರಣ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುವ ವಿದ್ಯಾರ್ಥಿಗಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಿದ್ದಾರೆ. ಪ್ರೌಢಶಾಲೆ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಮುಖ್ಯ ರಸ್ತೆಯಿಂದ 5 ಕಿಮೀ ದೂರ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು. ಹೀಗಾಗಿ ಏನಾದ್ರು ಅನಾಹುತ ಸಂಭವಿಸಬಹುದು ಎಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಾಥಮಿಕ ಶಿಕ್ಷಣದ ಬಳಿಕ ಖಾದ್ಯಾಪುರ ಗ್ರಾಮದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಹೊಲ- ಗದ್ದೆಗಳಲ್ಲಿ ಕಮರಿ ಹೋಗುತ್ತಿದೆ.

ಖಾದ್ಯಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲಿಯೂ ಪ್ರೌಢ ಶಾಲೆ, ಕಾಲೇಜುಗಳಿಲ್ಲ. ಹೀಗಾಗಿ 30-40 ಕಿ.ಮೀ ದೂರದ ಜೇವರ್ಗಿ, ಯಡ್ರಾಮಿ, ಶಾಹಪುರ ಮತ್ತು ನರಿಬೋಳಗಳಿಗೆ ಹೋಗುವುದು ಅನಿವಾರ್ಯ. 5 ಕಿಮೀ ದೂರ ಖಾಸಗಿ ವಾಹನಗಳಲ್ಲಿ ಮುಖ್ಯ ರಸ್ತೆ ತಲುಪಬೇಕಾದರೆ 200 ರೂ. ಬಾಡಿಗೆ ಕೊಡಬೇಕು‌. ಅಥವಾ 5 ಕಿಮೀ ನಡೆದುಕೊಂಡೇ ಹೋಗಬೇಕು.

ಗ್ರಾಮಕ್ಕೆ ಬಸ್ ಸೌಲಭ್ಯ ನೀಡುವಂತೆ ಖಾದ್ಯಪುರ ಗ್ರಾಮಸ್ಥರು, ಮಕ್ಕಳು ಸಾರಿಗೆ ಇಲಾಖೆ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ವರ್ಷಗಳಿಂದ ಮನವಿ ಮಾಡಿದ್ರು ಯಾವುದೇ ಪ್ರಯೋಜವಾಗಿಲ್ಲ‌. ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ರು ಫಲಸಿಕ್ಕಿಲ್ಲ. ಬದಲಾಗಿ ಸುಳ್ಳು ಭರವಸೆಗಳು ಸಿಕ್ಕಿವೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಇನ್ನು ಮುಂದಾದರೂ ಇಲ್ಲಿನ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಬಸ್ ಸೌಲಭ್ಯವಿಲ್ಲದೆ 7 ದಶಕಗಳಿಂದ ನಿತ್ಯ ಪರದಾಡುತ್ತಿರುವ ಖಾದ್ಯಾಪುರ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಸಾರಿಗೆ ಬಸ್ ಸೌಕರ್ಯ ಕಲ್ಪಿಸಿಕೊಡಬೇಕಿದೆ.

COURTESY: ETV BHARAT

 

Comments are closed.

Don`t copy text!