ಜೇವರ್ಗಿ:ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ಕುಟುಂಬಗಳು ಕೆಲಸ ಸಿಗದೆ ತಮ್ಮ ಜೀವನ ನಿರ್ವಹಣೆಗೆ ನಗರ ಪ್ರದೇಶ ಇಲ್ಲವೇ ದೂರದ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪ್ರವೃತ್ತಿಯನ್ನು ಅವಲಂಬಿಸಿವೆ. ಈ ಪ್ರವೃತ್ತಿಯನ್ನು ತಪ್ಪಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿನೂತನವಾಗಿ ” ದುಡಿಯೋಣ ಬಾ ಅಭಿಯಾನ” ಜಾರಿಗೆ ತಂದಿದೆ.
ಹಳ್ಳಿಗಳಲ್ಲಿನ ಕೂಲಿ ಕಾರ್ಮಿಕರು ಸೇರಿದಂತೆ ಬಡ ಕುಟುಂಬಗಳು ಬೇಸಿಗೆ ಕಾಲದಲ್ಲಿ ಸ್ಥಳೀಯವಾಗಿ ಕೆಲಸ ಸಿಗದ ಕಾರಣ ಉದ್ಯೋಗ ಅರಸಿಕೊಂಡು ದೊಡ್ಡ-ದೊಡ್ಡ ನಗರಗಳತ್ತ ಗುಳೆ ಹೋಗುತ್ತಾರೆ. ಇದನ್ನು ಮನಗಂಡ ಸರ್ಕಾರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿಯೇ ಕೆಲಸ ನೀಡುವ ಉದ್ದೇಶದಿಂದ ಮಾರ್ಚ್15 ರಿಂದ ಜೂನ್15 ರ ವರೆಗೆ ದುಡಿಯೋಣ ಬಾ ಅಭಿಯಾನ ಇಂದಿನಿಂದ ಆರಂಭವಾಗಿದೆ.
ಮಾ.15 ರಿಂದ 22 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಜನರಿಗೆ ಅಭಿಯಾನದ ಮಾಹಿತಿ ತಿಳಿಸಲು ಗೋಡೆ ಬರಹ, ಕರಪತ್ರ, ಪೆÇೀಸ್ಟರ್ ಸೇರಿದಂತೆ ಡಂಗೂರ ಸಾರುವ ಮೂಲಕ ಅಭಿಯಾನದ ಕುರಿತು ವ್ಯಾಪಕ ಪ್ರಚಾರ ನೀಡಲಾಗುವುದು.
ಮಾ.23 ರಿಂದ ಏ.1 ರವರೆಗೆ ಉದ್ಯೋಗ ಚೀಟಿ ಇಲ್ಲದವರಿಗೆ ಹೊಸದಾಗಿ ಉದ್ಯೋಗ ಚೀಟಿ ವಿತರಣೆ, ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ಒದಗಿಸಲು ಅಂದಾಜು ಪಟ್ಟಿ ತಯಾರಿಸುವುದು, ವ್ಯವಸ್ಥಿತವಾಗಿ ಕೂಲಿಕಾರ್ಮಿಕರ ಗುಪುಗಳನ್ನು ರಚಿಸಿ ಅವುಗಳಿಗೆ ಕಾಯಕ ಬಂಧು ನೇಮಕ, ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ ಕೆಲಸ ಕೊಡಲು ಆಯುಕ್ತಲಯ ಸೂಚಿಸಿರುತ್ತದೆ.
ಉಸ್ತುವಾರಿ ಸಮಿತಿಗಳ ರಚನೆ: ಅಭಿಯಾನದ ಯಶಸ್ಸಿಗೆ ಜಿಪಂ, ತಾಪಂ, ಗ್ರಾಪಂ ಮಟ್ಟದಲ್ಲಿ ಟಾಸ್ಕ್ ಫೆÇೀರ್ಸ್ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿ.ಪಂ. ಸಿಇಓ, ಉಪ ಕಾರ್ಯದರ್ಶಿಗಳು ಮತ್ತು ಅನುಷ್ಠಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಒಳಗೊಂಡಿರುತ್ತದೆ. ತಾಲೂಕು ಮಟ್ಟದಲ್ಲಿ ತಾ.ಪಂ.ಇಓ, ತಾಪಂ ಎಡಿ (ಮನರೇಗಾ) ಅಧಿಕಾರಿಗಳು, ಟಿಐಇಸಿ ಸಂಯೋಜಕರು ಮತ್ತು ಗ್ರಾಪಂಗಳ ಮಟ್ಟದಲ್ಲಿ ಪಿಡಿಓ, ಡಿಇಒ, ಬಿಲ್ ಕಲೆಕ್ಟರ್, ಬಿಎಫ್‍ಟಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳು ಒಳಗೊಂಡು ಅಭಿಯಾನದ ಸಮಿತಿ ರಚಿಸಲಾಗಿರುತ್ತದೆ.
ಅಭಿಯಾನದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿ: ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡಾ, ಶೆಡ್ ನಿರ್ಮಾಣ, ಸಮಗ್ರ ಕೆರೆ ಅಭಿವೃದ್ದಿ, ಸೋಕ್ ಪಿಟ್ , ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಷನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳಗಳ ಮುಂಗಡಗುಂಡಿ ತೆಗೆಯುವುದು. ಬೋರವೆಲ್ ರೀಚಾರ್ಜ್ ಕಾಮಗಾರಿ ಸೇರಿದಂತೆ ಅನೇಕ ಕಾಮಗಾರಿಗಳು ಅಭಿಯಾನದಡಿ ಕೈಗೆತ್ತಿಕೊಳ್ಳಬಹುದು.
ಮಹಿಳಾ ಕಾಯಕೋತ್ಸವ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಗ್ರಾಮೀಣ ಜನರಿಗೆ ಕೆಲಸ ಇಲ್ಲವೆಂದು ಉದ್ಯೋಗ ಅರಸಿ ಗುಳೆ ತಡೆಗೆ ಆರ್‍ಡಿಪಿಆರ್ ದುಡಿಯೋಣ ಬಾ ಅಭಿಯಾನ ಆರಂಭಿಸಿದ್ದು, ಗ್ರಾಮೀಣ ಜನರಿಗೆ ಉದ್ಯೋಗ ಕೊಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ತಾಲೂಕಿನ ಕೂಲಿಕಾರ್ಮಿಕರು ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು.
-ಬಸವರಾಜ್ ಸಜ್ಜನ, ಸಹಾಯಕ ನಿರ್ದೇಶಕ, ತಾಪಂ ಜೇವರ್ಗಿ
Comments are closed.