ಚಿತ್ತಾಪುರ: ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‍ಎಂಎಸ್‍ಎ) ಶಾಲೆಯಲ್ಲಿ ನಡೆದ ನೂತನ ಎಸ್‍ಡಿಎಂಸಿ ಸದಸ್ಯರಿಗೆ ಸನ್ಮಾನ ಮತ್ತು ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕಿ ಸುನಂದಾ ಬಾರಾಡ್ ಮಾತನಾಡಿದರು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ) ಪಾತ್ರ ಬಹಳ ಪ್ರಮುಖವಾಗಿದೆ ಎಂದು ಮುಖ್ಯಶಿಕ್ಷಕಿ ಸುನಂದಾ ಬಾರಾಡ್ ಹೇಳಿದರು.
ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‍ಎಂಎಸ್‍ಎ) ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಎಸ್‍ಡಿಎಂಸಿ ಸದಸ್ಯರಿಗೆ ಸನ್ಮಾನ ಮತ್ತು ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಲೆಯಲ್ಲಿನ ಸಮಸ್ಯೆಗಳಿಗೆ ಸ್ಪಂಧಿಸಿ ಅದಕ್ಕೆ ಬೇಕಾದ ಪರಿಹಾರೋಪಾಯ ಕ್ರಮ ಕೈಗೊಳ್ಳುವ ಮೂಲಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಶಿಕ್ಷಕ ಶಿವಪುತ್ರಪ್ಪ ವಿ.ಬಿ ಎಸ್‍ಡಿಎಂಸಿ ಕರ್ತವ್ಯಗಳು ಮತ್ತು ಅಧಿಕಾರಿಗಳ ಕುರಿತು ಮಾತನಾಡಿ, ಎಸ್‍ಡಿಎಂಸಿ ಸದಸ್ಯರು ಶಾಲಾಭಿವೃದ್ಧಿ ಯೋಜನೆ ತಯ್ಯಾರಿಸಿ ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ವರ್ಷದಲ್ಲಿ ಮೂರು ಬಾರಿ ಅಂದರೆ ಜುಲೈ, ನವೆಂಬರ್ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪೋಷಕರ ಸಭೆಗಳನ್ನು ಆಯೋಜಿಸುವುದು, ಶಾಲೆಗೆ ಮಂಜೂರಾದ ಅನುದಾನಗಳನ್ನು ನಿಯಮಾನುಸಾರ ಬಳಸಲು ಕಾಲಕಾಲಕ್ಕೆ ಅನುಮೋದನೆ ನೀಡಿ ಸಮರ್ಪಕವಾಗಿ ಬಳಕೆಯಾಗಿದೆಯೋ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಶಾಲೆಗೆ ಸಂಬಂಧಿಸಿದ ಎಲ್ಲ ಕಾಮಗಾರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.
ಶಾಲಾ ಸಿಬ್ಬಂದಿಯ ಸಕಾಲಿಕ ಹಾಗೂ ನಿಯಮಿತ ಹಾಜರಾತಿಯ ಮೇಲೆ ಗಮನ ನೀಡುವುದು, ಪ್ರೌಢಶಾಲಾ ಮುಖ್ಯಶಿಕ್ಷಕರುಗಳಿಗೆ ಸಾಂದರ್ಭಿಕ ಹಾಗೂ ನಿರ್ಬಂಧಿತ ರಜೆಯನ್ನು ಎಸ್‍ಡಿಎಂಸಿ ಅಧ್ಯಕ್ಷರು ಮಂಜೂರು ಮಾಡುವುದು, ಕನಿಷ್ಟ ತಿಂಗಳಿಗೊಮ್ಮೆ ಎಸ್‍ಡಿಎಂಸಿ ಸಭೆಯನ್ನು ನಡೆಸಬೇಕು ಸೇರಿದಂತೆ ಎಸ್‍ಡಿಎಂಸಿ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಉಪಾಧ್ಯಕ್ಷೆ ಸುನೀತಾ ತಳವಾರ, ಸದಸ್ಯರಾದ ಸುಭಾಶ್ಚಂದ್ರ ಅವಂಟಿ, ಮಲ್ಲಿನಾಥ ಕಡ್ಲಿ ಸಾತನೂರ, ರೀಯಾಜುದ್ದಿನ್ ಚುನ್ನುಮಿಯ್ಯಾ, ಆನಂದ ಮೇಲಗಡೆ, ಗಿರೀಶ ವಡ್ಡಡಗಿ, ಮಲ್ಲೇಶ ಪೂಜಾರಿ, ಹುಸನಯ್ಯ ಡೋಣಗಾಂವ, ನಾಗೇಶ ಲಕ್ಕಾ ಮೊಗಲಾ, ದೇವಸುಂದರ ಕರದಾಳ, ಶಿಕ್ಷಕರಾದ ವೀಣಾ ಕುಂಬಾರ, ರೂಪಾ, ಪುಷ್ಪಾವತಿ ಸೇರಿದಂತೆ ಇತರರು ಇದ್ದರು.
ಶಿಕ್ಷಕ ಯಲ್ಲಪ್ಪ ಅಮಟೂರ ಸ್ವಾಗತಿಸಿದರು. ಶಿಕ್ಷಕ ಕಾಶಿನಾಥ ಗಾಯಕವಾಡ್ ನಿರೂಪಿಸಿದರು. ಶಿಕ್ಷಕ ಸಂಗಮೇಶ ರೋಣದ್ ವಂದಿಸಿದರು.
Comments are closed.