Shubhashaya News

ಎಸ್.ಸಿ.ಪಿ.-ಟಿ.ಎಸ್.ಪಿ. ಪ್ರಗತಿ ಪರಿಶೀಲನಾ ಸಭೆ: ಪ್ರಸಕ್ತ ಸಾಲಿನ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು

ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಯಿಂದ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ಕುರಿತು ಬುಧವಾರ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಜಿಲ್ಲಾ ಕಚೇರಿಗಳು ಫೆಬ್ರವರಿ ಅಂತ್ಯದ ವರೆಗೆ ಸಾಧಿಸಿದ ಪ್ರಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಬುಧವಾರ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ನಿಗದಿತ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿದ ಕೆಲ ಇಲಾಖೆಗಳಿದ್ದು, ಮಾರ್ಚ್ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಅನುದಾನ ಲ್ಯಾಪ್ಸ್ಆಗುವುದಿಲ್ಲವೆಂದು ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು ಎಂದು ಅನುಷ್ಠಾನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಗಿರಿಜನ ಫಲಾನುಭವಿಗಳ ಗುರುತಿಸಲು ಶಿಬಿರ ಆಯೋಜಿಸಿ: ಜಿಲ್ಲೆಯಲ್ಲಿ ಗಿರಿಜನರ ಸಂಖ್ಯೆ ಕಡಿಮೆ ಇರುವುದರಿಂದ ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಫಲಾನುಭವಿಗಳ ಕೊರತೆ ಕಾಣುತ್ತಿದ್ದು, ಮುಂದಿನ ವರ್ಷ ಈ ಸಮಸ್ಯೆ ಉದ್ಭವಿಸದಂತೆ ಗಿರಿಜನರು ಹೆಚ್ಚಾಗಿ ವಾಸವಿರುವ ತಾಂಡಾ, ಗೊಲ್ಲರಹಟ್ಟಿಯಂತಹ ಸ್ಥಳಗಳಲ್ಲಿ ಕಾರ್ಯಾಗಾರ, ಕ್ಯಾಂಪ್ ಮಾಡುವ ಮೂಲಕ ಅರಿವು ಮೂಡಿಸಿ ಸ್ಥಳದಲ್ಲಿಯೆ ಯೋಜನೆಗಳ ಸೌಲಭ್ಯ ನೀಡುವತ್ತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಈ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಐ.ಇ.ಸಿ. ಚಟುವಟಿಕೆಗಳನ್ನು ತೀವ್ರಗೊಳಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಅವರು ಪ್ರಸಕ್ತ 2020-21ನೇ ಸಾಲಿಗೆ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ರಾಜ್ಯ ವಲಯದಲ್ಲಿ 18997.84 ಲಕ್ಷ ರೂ. ಮತ್ತು ಜಿಲ್ಲಾ ವಲಯದಲ್ಲಿ 3910.15 ಲಕ್ಷ ರೂ. ಸೇರಿದಂತೆ ಒಟ್ಟು 22907.99 ಲಕ್ಷ ರೂ. ಅನುದಾನ ಹಂಚಿಕೆಯಾಗಿದೆ. ಹಂಚಿಕೆ ಪೈಕಿ ಎರಡು ವಲಯಗಳಲ್ಲಿ ಒಟ್ಟಾರೆ 16340.03 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಫೆಬ್ರವರಿ ಅಂತ್ಯಕ್ಕೆ 12666.89 ಲಕ್ಷ ರೂ. ಖರ್ಚು ಮಾಡುವ ಮೂಲಕ ಬಿಡುಗಡೆಯಾದ ಅನುದಾನಕ್ಕೆ ಶೇ.77ರಷ್ಟು ಪ್ರಗತಿ ಸಾಧಿಸಿದೆ. ಈ ಅನುದಾನದಲ್ಲಿ 461568 ಫಲಾನುಭವಿಗಳು ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ. 1250 ಸಮುದಾಯ ಅಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ ಇದೂವರೆಗೆ 729 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ದಿಲೀಶ್ ಸಾಸಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.

Don`t copy text!