ಕಳೆದ ತಿಂಗಳು ಜರುಗಿದ್ದ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ. ಅದು ಸಹಜ ಸಾವಲ್ಲ ಅದು ಕೊಲೆ ಪ್ರಕರಣ ಎಂದು ಪತ್ತೆ ಹಚ್ಚುವಲ್ಲಿ ಆಳಂದ ತಾಲೂಕಿನ ನಿಂಬರ್ಗಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಫೆಬ್ರುವರಿ ತಿಂಗಳಿನ 16 ನೇ ತಾರೀಖಿನಂದು ನಿಂಬರ್ಗಾ ಗ್ರಾಮದ ಸೀಮೆಯ ಸ್ಟೇಶನ್ ಗಾಣಗಾಪೂರ- ಪಟ್ಟಣ ಕ್ರಾಸ್ ರೋಡಿನ ಬದಿಯಲ್ಲಿರುವ ಹೊಲದಲ್ಲಿ ಧಂಗಾಪೂರ ಗ್ರಾಮದ ರವಿ ಸುಭಾಷ್ ನಿಲೂರ ಎಂಬುವರ ಶವ ಪತ್ತೆಯಾಗಿತ್ತು. ಈ ಕುರಿತು ಮೃತನ ಪತ್ನಿ ತನ್ನ ಗಂಡನ ಸಾವಿನ ಬಗ್ಗೆ ಅನುಮಾನವಿದೆ ಇದು ಸಹಜ ಸಾವಲ್ಲ ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ದೂರು ನೀಡಿದ್ದಳು, ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಿಮಿ ಮೇರಿಯಮ್ ಜಾರ್ಜ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿಯವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಮಲ್ಲಿಕಾರ್ಜುನ ಸಾಲಿ ಇವರ ನೇತೃತ್ವದಲ್ಲಿ ಆಳಂದ ಸಿಪಿಐ ಮಂಜುನಾಥ ಎಸ್ ಮತ್ತು ನಿಂಬರ್ಗಾ ಪಿಎಸ್‍ಐ ಸುವರ್ಣಾ ಹಾಗೂ ಸಿಬ್ಬಂದಿಗಳಾದ ಶಂಕರ, ಮಲ್ಲಗೊಂಡ, ಮಲ್ಲಿಕಾರ್ಜುನ ಗೋಟುರ, ರಮೇಶ ಯಲ್ದೆ, ಶ್ರೀಕಾಂತ, ಶರಣಮ್ಮ, ಭೀಮಾಶಂಕರ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿತ್ತು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ.
ಖಚಿತ ಮಾಹಿತಿಯ ಮೇರೆಗೆ ಈ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿಗಳಾದÀ ಬಡದಾಳ ಚಿಂಚೋಳಿ ಗ್ರಾಮದ ಹುಚ್ಚಪ್ಪ ಶಿವಪ್ಪ ಬಸರಿಗಿಡ, ಲಾಡಪ್ಪ ಮಹಾದೇವಪ್ಪ ಉದಯಕರ್, ಘತ್ತರಗಿ ಗ್ರಾಮದ ಬಸವರಾಜ ಶರಣಪ್ಪ ಸಿಂಗೆ ಹಾಗೂ ಧಂಗಾಪೂರ ಗ್ರಾಮದ ಚಂದ್ರಕಲಾ ರವಿ ನಿಲೂರ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಹೊರ ಬಂದಿದೆ.
ಆರೋಪಿ ಹುಚ್ಚಪ್ಪ ಮೃತ ರವಿಯ ಹೆಂಡತಿ ಚಂದ್ರಕಲಾಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಇದಕ್ಕೆ ಮೃತ ರವಿ ಅಡ್ಡಿಪಡಿಸುತ್ತಿರುವುದರಿಂದ ಮೃತನ ಹೆಂಡತಿಯ ಸಹಕಾರದಿಂದ ಹುಚ್ಚಪ್ಪ ತನ್ನ ಸಂಗಡಿಗರ ಜೊತೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿರುವುದರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
Next Post
Comments are closed.