Shubhashaya News

ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು

ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಮಾಜಿ ಮತ್ತು ಹಾಲಿ ಸೈನಿಕರು ತಹಸೀಲದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಇತ್ತೀಚಿಗೆ ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ಹಲ್ಲೆ ನಡೆಸಿದ ಸಮಾಜಘಾತುಕ ಶಕ್ತಿಗಳನ್ನು ಅತ್ಯುಗ್ರ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಆಳಂದ ಹಾಗೂ ಸಿಂಧಗಿ ತಾಲೂಕಿನ ಮಾಜಿ ಮತ್ತು ಸೇವೆಯಲ್ಲಿರುವ ಸೈನಿಕರು ಸೋಮವಾರ ತಹಸೀಲದಾರರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು.
72 ವರ್ಷ ವಯಸ್ಸಿನ ಹಿರಿಯ ಜೀವಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಆದರೆ ಅವರ ಮೇಲೆ ಹೊರಸಿರುವ ಕಲಂಗಳಿಂದ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಕಡಿಮೆ ಇದೆ ಆದರಿಂದ ಅವರ ಮೇಲೆ ಗಂಭೀರ ಪ್ರಕರಣದ ಕಲಂಗಳನ್ನು ಸೇರಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸಾಯಂಕಾಲ ಕುಡಿದ ಮತ್ತಿನಲ್ಲಿ ಹೊಟೇಲಗೆ ನುಗ್ಗಿದ ಸಮಾಜಘಾತುಕರು 72 ವರ್ಷ ವಯಸ್ಸಿನ ಹಿರಿಜೀವ, ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಮಾಜಘಾತುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಪಡಿಸುವಂತೆ ಸಾರ್ವಜನಿಕರು ಆಗ್ರಹಪಡಿಸಿದ್ದರು.

ಇನ್ನೂ 72 ವರ್ಷ ವಯಸ್ಸಿನ ಹರಿನಂದ ಕೊಡಮೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಭಾರತ ಚೀನಾ ಯುದ್ಧದ ಸಮಯದಲ್ಲಿ ರಣಾಂಗಣದಲ್ಲಿ ತೊಡೆ ತಟ್ಟಿ ಶತ್ರುಗಳ ಜೊತೆ ಕಾದಾಟ ನಡೆಸಿದವರು. ಇವರ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಇವರಿಗೆ ಎರಡು ಪದಕಗಳನ್ನು ನೀಡಿ ಗೌರವಿಸಿದೆ. ಇಂತಹ ದೇಶಪುತ್ರನನ್ನು ಸಮಾಜಘಾತುಕ ಶಕ್ತಿಗಳು ಸಾರ್ವಜನಿಕವಾಗಿ ಹೀಗೆ ಹಲ್ಲೆ ಮಾಡಿರುವುದಕ್ಕೆ ಸೈನಿಕರು ಒಕ್ಕೊರಲಿನಿಂದ ಖಂಡಿಸಿದ್ದರು.
ತಂದೆಯ ಸ್ಥಾನದಲ್ಲಿರುವ, ಹಿರಿಯ ವಯಸ್ಸಿನ ಮಾಜಿ ಸೈನಿಕರ ಮೇಲೆ ಈ ರೀತಿ ಹಲ್ಲೆ ಮಾಡುವುದು ನ್ಯಾಯವೇ?. ಇಂತಹ ಸಮಾಜಘಾತುಕರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದರು.
ಹಲ್ಲೆ ನಡೆಸಿದ ಆರೋಪಿಗಳಾದ ಸತ್ರೋದ್ದೀನ್ ಅನ್ಸಾರಿ ಮತ್ತು ಮಾರುತಿ ಎಂಬುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲದಾರ ಕಾರ್ಯಾಲಯದಿಂದ ಹಲ್ಲೆಗೊಳಗಾದ ಮಾಜಿ ಸೈನಿಕ ಹರಿನಂದ ಕೊಡಮೂಡ ಅವರ ಮನೆತನಕ ಪಾದಯಾತ್ರೆ ಮಾಡಿ ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಹಾಗೂ ಹಾಲಿ ಸೇನೆಯಲ್ಲಿರುವ ಸೈನಿಕರಾದ ಮಾರುತಿ ಘೋಡಕೆ, ಬಂಡೆಪ್ಪ ಮಾಡ್ಯಾಳ, ಬಸವೇಶ್ವರ ಸಲಗರ, ರಾಜು ಅವರಾದಿ, ಹಣಮಂತ ಸುರೇಶ, ಈರಣ್ಣ ಹೂಗಾರ, ರಾಜು ಸಿಂಗೆ, ಶಾಂತಮಲ್ಲಪ್ಪ ಪಾಟೀಲ, ದತ್ತಾತ್ರೇಯ ಡೋಣಿ, ಶಶಿಕಾಂತ ಎಳಮೇಲಿ, ಹಣಮಂತ ಪಾತಾಳೆ, ಚೆನ್ನವೀರ ವಾಡಿ, ಸುಭಾಷ್ ಚವ್ಹಾಣ, ಶಾಂತಯ್ಯ ವಾಡಿ, ಖಾಜಪ್ಪ ಖ್ಯಾಮಗೋಳ ಸೇರಿದಂತೆ ಸಿಂಧಗಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

 

Comments are closed.

Don`t copy text!